LATEST NEWS
ಮಂಗಳೂರು – ವಿದ್ಯುತ್ ಕಂಬಗಳಲ್ಲಿರುವ ಅನಧಿಕೃತ ಇಂಟರ್ನೆಟ್ ಕೇಬಲ್ ತೆರವಿಗೆ ಕ್ರಮ

ಮಂಗಳೂರು ಜೂನ್ 30: ಮಂಗಳೂರು ನಗರದಲ್ಲಿ ವಿದ್ಯುತ್ ಕಂಬದಲ್ಲಿ ಕರೆಂಟ್ ವೈರ್ ಗಿಂತ ಹೆಚ್ಚಾಗಿ ಇಂಟರ್ ನೆಟ್ ಕೇಬಲ್ ಗಳು ಇದ್ದು, ಈ ಅನಧಿಕೃತ ಕೇಬಲ್ ಗಳಿಂದ ಪ್ರಾಣಕ್ಕೆ ಸಂಚಕಾರವಾಗುತ್ತಿದೆ. ಆದ್ದರಿಂದ ಅವುಗಳನ್ನು ತೆರವುಗೊಳಿಸುವ ಬಗ್ಗೆ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪಕ್ಷಬೇಧ ಮರೆತು ಸದಸ್ಯರು ಆಗ್ರಹಿಸಿದರು. ಈ ಬಗ್ಗೆ ಪಾಲಿಕೆ ಹಾಗೂ ಮೆಸ್ಕಾಂ ವತಿಯಿಂದ ಜಂಟಿ ಸರ್ವೆ ನಡೆಸಿ ತೆರವಿಗೆ ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ಭರವಸೆ ನೀಡಿದರು.
ಪಾಲಿಕೆಯ ಮಂಗಳಾಸಭಾಂಗಣದಲ್ಲಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ವಿಪಕ್ಷ ನಾಯಕ ಪ್ರವೀಣ್ ಚಂದ್ರ ಆಳ್ವ ಪ್ರಸ್ತಾಪಕ್ಕೆ ಸದಸ್ಯರಾದ ಮಹಮ್ಮದ್ ಲತೀಫ್, ಅಬ್ದುಲ್ ರವೂಫ್, ಶಶಿಧರ ಹೆಗ್ಡೆ ದನಿಗೂಡಿಸಿ, ವಿದ್ಯುತ್ ಕಂಬಗಳಲ್ಲಿ ಬೇಕಾಬಿಟ್ಟಿ ಕೇಬಲ್ ಅಳವಡಿಸಲಾಗಿದೆ. ಎಲ್ಲ ಕೇಬಲ್‌ಗಳನ್ನು ತೆರವುಗೊಳಿಸಿ ಭೂಗತ ಅಳವಡಿಕೆಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಮೆಸ್ಕಾಂ ಅಧಿಕಾರಿ, ಕಳೆದ ಎರಡು ವರ್ಷದಿಂದ ಹೊಸದಾಗಿ ಕೇಬಲ್ ಅಳವಡಿಕೆಗೆ ಯಾರಿಗೂ ಅನುಮತಿ ನೀಡಿಲ್ಲ.

ಪಾಲಿಕೆಯಿಂದ ನಿರಕ್ಷೇಪಣಾ ಪತ್ರ ನೀಡಿದರೆ ಮಾತ್ರ ಅನುಮತಿ ನೀಡಲಾಗುತ್ತದೆ. ಈ ಬಗ್ಗೆ ನೋಟಿಸ್ ನೀಡಿಯೇ ವಿದ್ಯುತ್ ಕಂಬಗಳಿಂದ ಕೇಬಲ್ ತೆರವಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಅನಧಿಕೃತ ಕೇಬಲ್‌ಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಮೇಯರ್ ಸೂಚಿಸಿದರು.