KARNATAKA
ನೇಣಿಗೆ ಶರಣಾದ ಅಂತರಾಷ್ಟ್ರೀಯ ಮಹಿಳಾ ಕಬ್ಬಡಿ ಕ್ರೀಡಾಪಟು ಧನಲಕ್ಷ್ಮೀ
ಬೆಂಗಳೂರು ಅಕ್ಟೋಬರ್ 26: ಅಂತಾರಾಷ್ಟ್ರೀಯ ಮಹಿಳಾ ಕಬಡ್ಡಿ ಕ್ರೀಡಾಪಟುವೊಬ್ಬರು ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮೃತರನ್ನು ಅಂತಾರಾಷ್ಟ್ರೀಯ ಮಹಿಳಾ ಕಬಡ್ಡಿ ಕ್ರೀಡಾಪಟು ಧನಲಕ್ಷ್ಮೀ ಎಂದು ಗುರುತಿಸಲಾಗಿದೆ. ಸ್ನೇಹಿತರೊಂದಿಗೆ ಮೈಸೂರು ದಸರಾ ನೋಡಿಕೊಂಡು ಬಂದಿದ್ದ ಧನಲಕ್ಷ್ಮೀ, ತಂದೆ ಹಾಗೂ ತಮ್ಮ ಮನೆಯಲ್ಲಿರುವಾಗಲೇ ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಅರಿಶಿನಕುಂಟೆ ಆದರ್ಶನಗರದ ನಿವಾಸದಲ್ಲಿ ಧನಲಕ್ಷ್ಮೀ(25) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ 3 ಬಾರಿ ಕಬ್ಬಡಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಧನಲಕ್ಷ್ಮೀ, ಕಾಡುಗೋಡಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಈ ಬಗ್ಗೆ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾವುದೋ ವಿಚಾರದಲ್ಲಿ ಮನನೊಂದು ತನ್ನಷ್ಟಕ್ಕೆ ತಾನೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ಯುವತಿಯ ಪೋಷಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.