DAKSHINA KANNADA
ತೀವ್ರಗೊಂಡ CPIM ಮಂಗಳೂರು ಪೊಲೀಸ್ ಕಮೀಷನರ್ ವಾರ್, CPIM ಜಿಲ್ಲಾ ಸಮಿತಿಯಿಂದ ಗೃಹ ಸಚಿವರ ಭೇಟಿ,ಕಮೀಷನರ್ ವರ್ಗಾವಣೆಗೆ ಮನವಿ..!
ಮಂಗಳೂರು : CPIM ಮತ್ತು ಮಂಗಳೂರು ಪೊಲೀಸ್ ಕಮೀಷನರ್ ನಡುವಿನ ಸಮರ ತೀವ್ರಗೊಂಡಿದ್ದು CPIM ದ.ಕ ಜಿಲ್ಲಾ ಸಮಿತಿಯ ನಿಯೋದ ಇಂದು ಗೃಹ ಸಚಿವರನ್ನು ಭೇಟಿ ಪೊಲೀಸ್ ಕಮೀಷನರನ್ನು ವರ್ಗಾವಣೆಗೆ ಮನವಿ ಸಲ್ಲಿಸಿತು.
CPIM ಪಕ್ಷದ ದ.ಕ. ಜಿಲ್ಲಾ ಸಮಿತಿಯ ನಿಯೋಗ ಮಂಗಳೂರು ಪ್ರವಾಸದಲ್ಲಿರುವ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರನ್ನು ಭೇಟಿ ಮಾಡಿ ಮಂಗಳೂರು ಪೊಲೀಸ್ ಕಮೀಷನರ್ ವಿರುದ್ಧ ಲಿಖಿತ ದೂರು ನೀಡಿತು. ಶಿಸ್ತು ಕ್ರಮ ಕೈಗೊಂಡು ವರ್ಗಾಯಿಸುವಂತೆ ಆಗ್ರಹಿಸಿತು. ಜನಪರ ಸಂಘಟನೆಗಳು ನಡೆಸುವ ಪ್ರತಿಭಟನೆ, ಧರಣಿಗಳಿಗೆ ವಿನಾಕಾರಣ ಅನುಮತಿ ನಿರಾಕರಿಸುವುದು, ಪ್ರತಿಭಟನಾಕಾರರ ಮೇಲೆ ಸುಳ್ಳು ಮೊಕದ್ದಮೆಗಳನ್ನು ಹೂಡುತ್ತಿರುವುದು ಮಂಗಳೂರಿನಲ್ಲಿ ಜನಾಕ್ರೋಶಕ್ಕೆ ಕಾರಣವಾಗಿದೆ. ಸಿಪಿಐಎಂ ಪಕ್ಷವು ಕಮೀಷನರ್ ಅನುಪಮ್ ಅಗ್ರವಾಲ್, ಡಿಸಿಪಿ ಸಿದ್ದಾರ್ಥ ಗೋಯಲ್ ರ ಸರ್ವಾಧಿಕಾರಿ ಧೋರಣೆಯ ವಿರುದ್ಧ ಸರಣಿ ಪ್ರತಿಭಟನೆಗೆ ಕರೆ ನೀಡಿದ್ದು, ವರ್ಗಾವಣೆಗೆ ಪಟ್ಟು ಹಿಡಿದಿದೆ. ಅದರ ಭಾಗವಾಗಿ ಇಂದು ಸಿಪಿಐಎಂ ಜಿಲ್ಲಾ ಸಮಿತಿ ನಿಯೋಗ ಗೃಹ ಸಚಿವರನ್ನು ಖುದ್ದು ಭೇಟಿಯಾಗಿ ಮನವಿ ಸಲ್ಲಿಸಿತು.
ಮನವಿ ಸಲ್ಲಿಸುವ ಸಂದರ್ಭ, ಕಮೀಷನರ್ ಅಗ್ರವಾಲ್ ಪ್ರತಿಭಟನೆ, ಧರಣಿಗಳನ್ನು ವಿನಾ ಕಾರಣ ನಿರ್ಬಂಧಿಸಿರುವ, ಪ್ರತಿಭಟನಾಕಾರರ ಮೇಲೆ ಸುಳ್ಳು ಮೊಕದ್ದಮೆ ಹೂಡಿರುವ ವಿವರಗಳ ಜೊತೆಗೆ, ಕೋಮುವಾದಿ ಶಕ್ತಿಗಳ ಪರವಾಗಿ ಕಾರ್ಯನಿರ್ವಸುವ ಅವರ ನಡೆಯನ್ನು ಹಲವು ನಿದರ್ಶನಗಳ ಮೂಲಕ ಗೃಹ ಸಚಿವರ ಮುಂದೆ ಮಂಡಿಸಿತು. ಬಿಜೆಪಿ ಮುಖಂಡರು, ಜನಪ್ರತಿನಿಧಿಗಳಿಗೆ ರಸ್ತೆ ಮುಚ್ಚಿ ದಿನಗಟ್ಟಲೆ ಕಾರ್ಯಕ್ರಮ ನಡೆಸಲು ಅನುವು ನೀಡುವ, ಮತೀಯ ಕ್ರಿಮಿನಲ್ ಗಳು, ಮತೀಯ ದ್ವೇಷದ ಕೊಲೆ ಆರೋಪಿಗಳು ಪೊಲೀಸರ ಜೊತೆಯಾಗಿ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಂಡಿರುವ ಘಟನೆಗಳನ್ನೂ ಗೃಹ ಸಚಿವರ ಗಮನಕ್ಕೆ ನಿಯೋಗ ತಂದಿತು. ಕಮೀಷನರ್ ಅನುಪಮ್ ಅಗ್ರವಾಲ್ ರ ಅಕ್ರಮಗಳು, ಸರ್ವಾಧಿಕಾರಿ ನಡೆ, ಭ್ರಷ್ಟಾಚಾರ, ಕೋಮು ಶಕ್ತಿಗಳೊಂದಿಗಿನ ಒಡನಾಟದ ಕುರಿತು ಇಲಾಖಾ ತನಿಖೆ ನಡೆಸುವಂತೆ, ತಕ್ಷಣದಿಂದಲೇ ಅವರನ್ನು ಮಂಗಳೂರಿನಿಂದ ವರ್ಗಾಯಿಸುವಂತೆ ಅಗ್ರಹಿಸಿತು.
ನಿಯೋಗದಲ್ಲಿ ಸಿಪಿಐಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ ಯಾದವ ಶೆಟ್ಟಿ, ವಸಂತ ಆಚಾರಿ, ಸುನಿಲ್ ಕುಮಾರ್ ಬಜಾಲ್, ಮಂಗಳೂರು ನಗರ ಸಮಿತಿ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಉಪಸ್ಥಿತರಿದ್ದರು.