LATEST NEWS
ಡೆಲಿವರಿ ನೌಕರರಿಗೆ ಇನ್ಸೂರೆನ್ಸ್ – ಸೇವಾಸಿಂಧು ವೆಬ್ ಸೈಟ್ ನಲ್ಲಿ ನೋಂದಣಿಗೆ ಸೂಚನೆ
ಉಡುಪಿ, ಡಿಸೆಂಬರ್ 19 : ಕಾರ್ಮಿಕ ಇಲಾಖೆಯ ವತಿಯಿಂದ ಸ್ವಿಗ್ಗಿ, ಜ್ಹೊಮ್ಯಾಟೋಗಳಲ್ಲಿ ಫುಡ್ ಡೆಲಿವರಿ ಮಾಡುವ ಹಾಗೂ ಇ-ಕಾಮರ್ಸ್ ಸಂಸ್ಥೆಗಳಾದ ಅಮೇಜಾನ್, ಬಿಗ್ ಬಾಸ್ಕೆಟ್, ಪ್ಲಿಪ್ ಕಾರ್ಟ್ ಸಂಸ್ಥೆಗಳಲ್ಲಿ ಪೂರ್ಣಕಾಲಿಕ ಹಾಗೂ ಅರೆಕಾಲಿಕ ಡೆಲಿವರಿ ನೌಕರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಗಿಗ್ ಕಾರ್ಮಿಕರುಗಳು ಸರಕು ಸೇವೆಗಳನ್ನು ನಿಗಧಿತ ಸಮಯಕ್ಕೆ ಸರಿಯಾಗಿ ವಾಹನಗಳಲ್ಲಿ ವಿತರಿಸುವ ಸಂದರ್ಭದಲ್ಲಿ ಅಪಘಾತಕ್ಕೆ ತುತ್ತಾಗುವ ಸಾಧ್ಯತೆ ಇದ್ದು, ಅಪಘಾತದಿಂದ ಮರಣ ಅಥವಾ ಸಂಪೂರ್ಣ ಶಾಶ್ವತ ದುರ್ಬಲತೆ ಹೊಂದಿದ್ದಲ್ಲಿ ಅವರು ಹಾಗೂ ಅವರ ಅವಲಂಭಿತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ.
ಇಂತಹ ಸಂದರ್ಭದಲ್ಲಿ ಗಿಗ್ ಕಾರ್ಮಿಕರುಗಳಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ದೃಷ್ಠಿಯಿಂದ ಕರ್ನಾಟಕ ರಾಜ್ಯ ಗಿಗ್ ಕಾರ್ಮಿಕರ ವಿಮಾ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಈ ಯೋಜನೆಯಡಿ ನೊಂದಾಯಿಸಿದ ಫಲಾನುಭವಿಗಳು ಅಪಘಾತದಿಂದ ಉಂಟಾಗುವ ಮರಣ, ಸಂಪೂರ್ಣ ಶಾಶ್ವತ/ ಭಾಗಶಃ ದುರ್ಬಲತೆಗೆ ಹಾಗೂ ತಾತ್ಕಾಲಿಕ ದುರ್ಬಲತೆಗೆ ಕಾನೂನು ಬದ್ಧ ವಾರಸುದಾರರಿಗೆ ಅಥವಾ ಫಲಾನುಭವಿಗೆ ವಿಮಾ ಮೊತ್ತ ದೊರೆಯಲಿದೆ. ಜಿಲ್ಲೆಯ 18 ರಿಂದ 60 ವರ್ಷದೊಳಗಿನ ಎಲ್ಲಾ ಗಿಗ್ ಕಾರ್ಮಿಕರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಸೇವಾಸಿಂಧು ತಂತ್ರಾಂಶದಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಅಧಿಕಾರಿ, ಉಡುಪಿ ಉಪವಿಭಾಗ, ರಜತಾದ್ರಿ, ಮಣಿಪಾಲ, ಉಡುಪಿ ಅಥವಾ ಉಡುಪಿ, ಕಾರ್ಕಳ ಮತ್ತು ಕುಂದಾಪುರ ಕಾರ್ಮಿಕ ನಿರೀಕ್ಷಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.