LATEST NEWS
ಆರೋಗ್ಯವಂತ ಸಮಾಜ ನಿರ್ಮಾಣವಾಗಲಿ: ಕೆ. ಜಯಪ್ರಕಾಶ್ ಹೆಗ್ಡೆ
ಉಡುಪಿ, ಆಗಸ್ಟ್ 8 : ಮುಂದಿನ ಜನಾಂಗ ಆರೋಗ್ಯವಂತರಾಗಿರಲು ಹಾಗೂ ಆರೋಗ್ಯಕರ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಗರ್ಭಿಣಿಯರು ಮತ್ತು 0-5 ವರ್ಷದೊಳಗಿನ ಮಕ್ಕಳಿಗೆ ಎಲ್ಲಾ ಅವಶ್ಯಕ ಲಸಿಕೆಗಳನ್ನು ನಿಗಧಿತ ಅವಧಿಯೊಳಗೆ ತಪ್ಪದೇ ನೀಡುವ ಅಗತ್ಯವಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.
ಉಡುಪಿಯ ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಡುಪಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ನಡೆದ, ಪರಿಣಾಮಕಾರಿ ಮಿಷನ್ ಇಂದ್ರ ಧನುಷ್ 5.0 ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳನ್ನು ಯಾವುದೇ ರೋಗಗಳು ಕಾಡದಂತೆ ಮತ್ತು ಆರೋಗ್ಯಯುತ ಬೆಳವಣಿಗೆ ಹೊಂದಲು ನಿಗಧಿತ ಅವಧಿಯೊಳಗೆ ಅಗತ್ಯವಿರುವ ಎಲ್ಲಾ ಲಸಿಕೆಗಳನ್ನು ಕೊಡಿಸುವುದು ಪ್ರತಿಯೊಬ್ಬ ಪೋಷಕರ ಜವಾಬ್ದಾರಿಯಾಗಿದೆ. ಪೋಲಿಯೋ ನಿರ್ಮೂಲನೆ ರೀತಿಯಲ್ಲಿ ದಡಾರ ರೂಬೆಲ್ಲಾ ಸೇರಿದಂತೆ ಮಕ್ಕಳನ್ನು ಕಾಡುವ ಎಲ್ಲಾ ರೋಗಳನ್ನು ಸಂಪೂರ್ಣ ನಿರ್ಮೂಲನೆಗೊಳಿಸಬೇಕಿದೆ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯು ಆರೋಗ್ಯ ಕ್ಷೇತ್ರದಲ್ಲಿ ಗಮನಾರ್ಹ ಬೆಳವಣಿಗೆ ಹೊಂದಿದ್ದು, ಇಲ್ಲಿ ಉತ್ತಮ ವೈದ್ಯಕೀಯ ವ್ಯವಸ್ಥೆ, ವೈದ್ಯರು ಮತ್ತು ಶುಶ್ರೂಶಕ ಸಿಬ್ಬಂದಿಗಳು ಇದ್ದಾರೆ. ಯಾರೋ ಮಾಡಿದ ತಪ್ಪಿಗೆ ಜಿಲ್ಲೆಗೆ ಆಪಾದನೆಗಳು ಬರುತ್ತಿವೆ ಎಂದರು. ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಮಾತನಾಡಿ, ಮಕ್ಕಳನ್ನು ಮತ್ತು ಗರ್ಭಿಣಿಯನ್ನು ಕಾಡುವ ಅನೇಕ ಕಾಯಿಲೆಗಳಿಗೆ ಮಿಷನ್ ಇಂದ್ರ ಧನುಷ್ ಅಭಿಯಾನದಲ್ಲಿ ನೀಡುವ ಲಸಿಕೆಗಳು ಪರಿಣಾಮಕಾರಿಯಾಗಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಿ, ರೋಗಗಳು ಬಾರದಂತೆ ತಡೆಯಲಿವೆ. ಜಿಲ್ಲೆಯಲ್ಲಿ ಯಾವುದೇ ಅರ್ಹ ಗರ್ಭಿಣಿ ಮತ್ತು ಮಕ್ಕಳು ಈ ಲಸಿಕಾ ಅಭಿಯಾನದಿಂದ ವಂಚಿತರಾಗದಂತೆ ಎಲ್ಲರಿಗೂ ಲಸಿಕೆ ನೀಡಿ, ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವುದು ನಾಗರೀಕ ಸಮಾಜದಲ್ಲಿನ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಜಿಲ್ಲೆಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಕೆಲಸಗಳು ನಡೆಯುತ್ತಿವೆ. ಎಲ್ಲಾ ವೈದ್ಯರು ಮತ್ತು ಸಿಬ್ಬಂದಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದನ್ನೂ ಇನ್ನೂ ಎತ್ತರಕ್ಕೆ ಕೊಂಡೊಯ್ಯಬೇಕಿದೆ ಎಂದರು.
ನಗರಸಭೆ ಸದಸ್ಯೆ ಮಾನಸ ಪೈ, ಜಿಲ್ಲಾ ಸರ್ಜನ್ ಡಾ.ಸುದೇಶ್ ಕುಮಾರ್, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ರಾಜಗೋಪಾಲ ಭಂಡಾರಿ ಉಪಸ್ಥಿತರಿದ್ದರು.
ಜಿಲ್ಲೆಯಲ್ಲಿ ಲಸಿಕೆ ವಂಚಿತ ಗರ್ಭಿಣಿಯರು ಮತ್ತು 0-5 ವರ್ಷದೊಳಗಿನ ಮಕ್ಕಳಿಗೆ ಪರಿಣಾಮಕಾರಿ ಮಿಷನ್ ಇಂದ್ರ ಧನುಷ್ 5.0 ಲಸಿಕಾ ಕಾರ್ಯಕ್ರಮವನ್ನು, ಆಗಸ್ಟ್ 7 ರಿಂದ 12 ಮೊದಲನೇ ಸುತ್ತು, ಸೆಪ್ಟಂಬರ್ 11 ರಿಂದ 16 ರ ವರೆಗೆ 2 ನೇ ಸುತ್ತು ಹಾಗೂ ಅಕ್ಟೋಬರ್ 9 ರಿಂದ 14 ರ ವರೆಗೆ ಒಟ್ಟು 3 ಸುತ್ತುಗಳಲ್ಲಿ ಆಯೋಜಿಸಲಾಗುತ್ತಿದ್ದು, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದ ವೇಳಾಪಟ್ಟಿಯಂತೆ ವಯಸ್ಸಿಗನುಗುಣವಾಗಿ ಲಸಿಕೆ ಪಡೆಯಲು ಅರ್ಹರಾದ ಮತ್ತು ಲಸಿಕೆ ವಂಚಿತರಾದ ಗರ್ಭಿಣಿ ಮತ್ತು ಮಕ್ಕಳಿಗೆ ಲಸಿಕಾ ಶಿಬಿರ ಆಯೋಜಿಸಿ ಲಸಿಕೆ ನೀಡಲಾಗುವುದು. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ 708 ಗರ್ಭಿಣಿಯರು ಮತ್ತು 0-2 ವರ್ಷದೊಳಗಿನ ಲಸಿಕೆಗೆ ಅರ್ಹರಾದ 3188 ಮಕ್ಕಳಿಗೆ ಹಾಗೂ 2-5 ವರ್ಷದೊಳಗಿನ ಲಸಿಕೆ ವಂಚಿತ 16 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಿದ್ದು, ಇದಕ್ಕಾಗಿ 294 ಲಸಿಕಾ ಕೇಂದ್ರಗಳನ್ನು ಗುರುತಿಸಲಾಗಿದೆ.