LATEST NEWS
ಇಂದೋರ್ – ದೇವಾಲಯದ ನೆಲ ಕುಸಿತ ಸಾವಿನ ಸಂಖ್ಯೆ 35ಕ್ಕೆ ಏರಿಕೆ….!!
ಇಂದೋರ್ ಮಾರ್ಚ್ 31: ಇಂದೋರ್ ನ ದೇವಾಲಯದ ನೆಲ ಕುಸಿದ ಪರಿಣಾಮ ಸಾವನಪ್ಪಿದವರ ಸಂಖ್ಯೆ ಇದೀಗ 35ಕ್ಕೆ ಏರಿಕೆಯಾಗಿದೆ.
ಗುರುವಾರ ರಾಮನವಮಿಯ ಹಿನ್ನೆಲೆ ನಗರದ ಬಾಳೇಶ್ವರ ಮಹಾದೇವ ದೇವಾಲಯದಲ್ಲಿ ಹೆಚ್ಚಿನ ಭಕ್ತರು ಆಗಮಿಸಿದ್ದರು. ದೇವಾಲಯದ ಆವರಣದಲ್ಲಿ ಮೆಟ್ಟಿಲು ಬಾವಿಯಿದ್ದು, ಅದಕ್ಕೆ ಮೇಲ್ಛಾವಣಿ ಹಾಕಿ ಮುಚ್ಚಲಾಗಿತ್ತು. ಆದರೆ ಕಳೆದ ದಿನ ಹೆಚ್ಚಿನ ಸಂಖ್ಯೆಯಲ್ಲಿ ಜನರಿದ್ದ ಕಾರಣ ಬಾವಿಯ ಮೇಲ್ಛಾವಣಿ ಭಾರ ತಡೆದುಕೊಳ್ಳಲಾರದೇ ಕುಸಿದುಬಿಟ್ಟಿದೆ. ಈ ವೇಳೆ ಅಲ್ಲಿ ನೆರೆದಿದ್ದ ಭಕ್ತರು ಬಾವಿಯೊಳಗೆ ಬಿದ್ದಿದ್ದಾರೆ.
ಘಟನೆ ನಡೆದ ತಕ್ಷಣಕ್ಕೆ ಪ್ರತ್ಯಕ್ಷದರ್ಶಿಗಳು ಸುಮಾರು 25 ಜನರು ಬಾವಿಯೊಳಗೆ ಬಿದ್ದಿದ್ದಾಗಿ ತಿಳಿಸಿದ್ದರು. ಆದರೆ ಅಂದಾಜಿಸಿದ್ದಕ್ಕಿಂತಲೂ ಹೆಚ್ಚು ಜನರು ಬಾವಿಯೊಳಗೆ ಬಿದ್ದಿದ್ದರು ಎಂಬುದು ತಿಳಿದುಬಂದಿದೆ. ಈಗಾಗಲೇ ಮೃತರ ಸಂಖ್ಯೆ 35ಕ್ಕೆ ಏರಿದೆ. ಬಾವಿಗೆ ಬಿದ್ದಿದ್ದ 14 ಜನರ ರಕ್ಷಣೆ ಮಾಡಲಾಗಿದೆ. ಒಬ್ಬರು ಇನ್ನೂ ನಾಪತ್ತೆಯಾಗಿದ್ದಾರೆ ಎನ್ನಲಾಗಿದ್ದು, ಅವರಿಗಾಗಿ ಹುಡುಕಾಟ ಮುಂದುವರಿಸಲಾಗಿದೆ.
ಇದೀಗ ರಕ್ಷಿಸಲ್ಪಟ್ಟವರಲ್ಲಿ ಇಬ್ಬರು ಗಾಯಾಳುಗೆ ಚಿಕಿತ್ಸೆ ನೀಡಿದ ಬಳಿಕ ಸುರಕ್ಷಿತವಾಗಿ ಮನೆಗೆ ಕಳುಹಿಸಲಾಗಿದೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘಟನೆಯಲ್ಲಿ ಮೃತಪಟ್ಟ ಕುಟುಂಬದವರಿಗೆ ತಲಾ 5 ಲಕ್ಷ ರೂ. ಪರಿಹಾರ ಹಾಗೂ ಗಾಯಗೊಂಡವರಿಗೆ 50 ಸಾವಿರ ರೂ. ಪರಿಹಾರ ಘೋಷಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಚೌಹಾಣ್ ಅವರೊಂದಿಗೆ ಪರಿಸ್ಥಿತಿಯನ್ನು ಅವಲೋಕನ ಮಾಡಿದ್ದಾರೆ