LATEST NEWS
ಎರಡು ವರ್ಷಗಳಲ್ಲಿ ಟೋಲ್ ಗೇಟ್ ಬಂದ್..ಜಿಪಿಎಸ್ ಆಧಾರಿತ ಟೋಲ್ ವ್ಯವಸ್ಥೆ
ನವದೆಹಲಿ: ಇನ್ನು ಎರಡು ವರ್ಷಗಳಲ್ಲಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಗೇಟ್ ಗಳನ್ನು ಸಂಪೂರ್ಣ ತೆಗೆದು ಹಾಕಿ, ಹೆದ್ದಾರಿಗಳಲ್ಲಿ ಹೊಸ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಸಿದ್ಧತೆ ನಡೆಸುತ್ತಿದೆ ಎಂದು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಅಸೋಚಾಮ್ ಸಂಸ್ಥಾಪನಾ ವಾರ ಆಚರಣೆಯ ಸಂದರ್ಭ ಮಾತನಾಡಿದ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ರಷ್ಯಾ ಸರ್ಕಾರದ ಸಹಾಯದೊಂದಿಗೆ ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆ ವಿಸ್ತೃತ ಪರೀಕ್ಷೆ ನಡೆಸಲಾಗಿದ್ದು ಯೋಜನೆ ಅಂತಿಮಗೊಳಿಸಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ಭಾರತವು ಟೋಲ್ ಬೂತ್ ರಹಿತ ಹೆದ್ದಾರಿಗಳನ್ನು ಹೊಂದಲಿದೆ. ಜಿಪಿಎಸ್ ವ್ಯವಸ್ಥೆ ಮೂಲಕ ವಾಹನಗಳನ್ನು ಟ್ರ್ಯಾಕ್ ಮಾಡಲಾಗುವುದು. ವಾಹನ ಮಾಲೀಕರ ಬ್ಯಾಂಕ್ ಖಾತೆಯಿಂದ ಬಾಕಿ ಟೋಲ್ ಹಣ ಸಂದಾಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಜಿಪಿಎಸ್ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಜಾರಿಗೆ ಬಂದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಐದು ವರ್ಷಗಳಲ್ಲಿ ₹1.34 ಲಕ್ಷ ಕೋಟಿ ಆದಾಯ ಸಂಗ್ರಹವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಇತ್ತೀಚಿನ ಹೊಸ ಪ್ರಯಾಣಿಕ ಮತ್ತು ವಾಣಿಜ್ಯ ವಾಹನಗಳು ಜಿಪಿಎಸ್ ಒಳಗೊಂಡಿರುತ್ತವೆ. ಹಳೆಯ ವಾಹನಗಳಿಗೂ ಜಿಪಿಎಸ್ ಅಳವಡಿಸುವ ಬಗ್ಗೆ ಸರ್ಕಾರ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.