LATEST NEWS
ಭಾರತ ನೌಕಾಪಡೆ ಪರಾಕ್ರಮ, ಸೊಮಾಲಿಯಾ ಕಡಲ್ಗಳ್ಳರಿಂದ 19 ಪಾಕಿಸ್ತಾನಿಯರ ರಕ್ಷಣೆ..!
ನವದೆಹಲಿ: ಅರಬ್ಬೀ ಸಮುದ್ರದಲ್ಲಿ ಸೊಮಾಲಿಯಾ ಕಡಲ್ಗಳ್ಳರ ಹಾವಳಿ ತೀವ್ರಗೊಂಡಿದ್ದರೂ ಭಾರತೀಯ ನೌಕಾಪಡೆ ಅದನ್ನು ಯಶಸ್ವಿಯಾಗಿ ಮಟ್ಟಹಾಕುತ್ತಿದೆ. ಅರಬ್ಬೀ ಸಮುದ್ರದಲ್ಲಿ ಪಾಕಿಸ್ತಾನದ 19 ನಾಗರಿಕರಿದ್ದ ಹಡಗನ್ನು ಅಪಹರಿಸಿದ್ದ ಸೊಮಾಲಿಯಾ ಕಡಲ್ಗಳ್ಳರನ್ನು ಭಾರತದ ನೌಕಾಪಡೆ ಬಂಧಿಸಿದೆ.
ಭಾರತೀಯ ನೌಕಾಪಡೆಯ ಐಎನ್‌ಎಸ್ ಸುಮಿತ್ರ ಸಮರನೌಕೆ ಪಾಕಿಸ್ತಾನದ ಹಡಗು ಮತ್ತು 19 ನಾಗರಿಕರನ್ನು ರಕ್ಷಿಸಿದೆ. ಜೊತೆಗೆ 11 ಕಡಲ್ಗಳ್ಳರನ್ನು ಬಂಧಿಸಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ನೌಕಾಪಡೆ “ಐಎನ್‌ಎಸ್ ಸುಮಿತ್ರ ಸಮರನೌಕೆಯು ಎರಡನೇ ರಕ್ಷಣಾ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಕೈಗೊಂಡಿದೆ. ಸೋಮಾಲಿ ಕಡಲ್ಗಳ್ಳರಿಂದ ನೌಕೆ ಹಾಗೂ 19 ಜನರನ್ನು ರಕ್ಷಿಸಲಾಗಿದೆ. ಪಾಕಿಸ್ತಾನದ ಮೀನುಗಾರಿಕಾ ನೌಕೆಯಾದ ಅಲ್ ನಯೀಮಿಯನ್ನು ಸೊಮಾಲಿಯಾದ ಉತ್ತರ ಕರಾವಳಿಯಲ್ಲಿ ಕಡಲ್ಗಳ್ಳರು ಅಪಹರಿಸಿದ್ದರು. ಐಎನ್‌ಎಸ್ ಸುಮಿತ್ರ ಯುದ್ಧನೌಕೆಯ ಮೂಲಕ ಕಡಲ್ಗಳ್ಳರಿಂದ 19 ಜನರನ್ನು ರಕ್ಷಿಸಲಾಗಿದೆ. ಹಾಗೆಯೇ, ಕಡಲ್ಗಳ್ಳರನ್ನು ವಶಕ್ಕೆ ಪಡೆಯಲಾಗಿದೆ” ಎಂದು ಭಾರತದ ನೌಕಾಪಡೆಯು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.
ಭಾರತದ ನೌಕಾಪಡೆಯು ಅರಬ್ಬೀ ಸಮುದ್ರದಲ್ಲಿ ನಾಗರಿಕರು ಹಾಗೂ ಹಡಗು ರಕ್ಷಣೆಗೆ ಕೈಗೊಳ್ಳುತ್ತಿರುವ ಎರಡನೇ ಯಶಸ್ವಿ ರಕ್ಷಣಾ ಕಾರ್ಯಾಚರಣೆ ಇದಾಗಿದೆ. ಕಳೆದ ಭಾನುವಾರ (ಜನವರಿ 28) ಇರಾನ್ ಮೂಲದ ಹಡಗು ಹಾಗೂ ಹಡಗಿನಲ್ಲಿದ್ದ 17 ಜನರನ್ನು ರಕ್ಷಿಸಲಾಗಿತ್ತು. ಐಎನ್‌ಎಸ್ ಸುಮಿತ್ರ ಯುದ್ಧ ನೌಕೆ ಮೂಲಕವೇ ಕಾರ್ಯಾಚರಣೆ ಕೈಗೊಂಡು ಕಡಲ್ಗಳ್ಳರಿಂದ ರಕ್ಷಣೆ ಮಾಡಲಾಗಿತ್ತು. ಈಗ ಮತ್ತೊಂದು ಹಡಗು ರಕ್ಷಣೆ ಮಾಡಿರುವ ಕುರಿತು ನೌಕಾಪಡೆಯು ಮಾಹಿತಿ ನೀಡಿದೆ ಜೊತೆಗೆ ಫೋಟೊಗಳನ್ನು ಕೂಡ ಹಂಚಿಕೊಂಡಿದೆ.
ಸಾಗರ ಪ್ರದೇಶದಲ್ಲಿ ಇತ್ತೀಚೆಗೆ ಸೊಮಾಲಿಯಾ ಕಡಲ್ಗಳ್ಳರು, ಇರಾನ್ ಬೆಂಬಲಿತ ಹೌತಿ ಉಗ್ರರ ಉಪಟಳ ಜಾಸ್ತಿಯಾಗಿದೆ. ಅದರಲ್ಲೂ, ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಪ್ಯಾಲೆಸ್ತೀನ್‌ನ ಹಮಾಸ್ ಉಗ್ರರು ದಾಳಿ ನಡೆಸಿದ ಬಳಿಕ ಗಾಜಾ ನಗರದ ಮೇಲೆ ಇಸ್ರೇಲ್ ನಿರಂತರವಾಗಿ ದಾಳಿ ನಡೆಸುತ್ತಿದೆ. ಇಸ್ರೇಲ್ ದಾಳಿಗೆ ಗಾಜಾ ನಗರವೇ ತತ್ತರಿಸಿಹೋಗಿದೆ. ಇಸ್ರೇಲ್ ದಾಳಿಯು ಹಲವು ಇಸ್ಲಾಮಿಕ್ ರಾಷ್ಟ್ರಗಳ ಕಣ್ಣು ಕೆಂಪಾಗುವಂತೆ ಮಾಡಿದೆ. ಹಾಗಾಗಿ, ಇರಾಕ್ ಬೆಂಬಲಿತ ಹೌತಿ ಉಗ್ರರು ಕೆಂಪು ಸಮುದ್ರದಲ್ಲಿ ನೌಕೆಗಳ ಅಪಹರಣ, ದಾಳಿ ನಡೆಸುತ್ತಿದ್ದಾರೆ. ಆದರೂ, ಭಾರತದ ನೌಕಾಪಡೆಯು ಉಗ್ರರು, ಕಡಲ್ಗಳ್ಳರಿಗೆ ಸರಿಯಾದ ತಿರುಗೇಟು ನೀಡಿ, ಹಡಗು, ನಾಗರಿಕರನ್ನು ರಕ್ಷಿಸುತ್ತಿದೆ.
https://x.com/indiannavy/status/1752175155705774581?s=20