LATEST NEWS
ಅಮೇರಿಕಾ ಮನೆಯಲ್ಲಿ ಅವಳಿ ಮಕ್ಕಳೊಂದಿಗೆ ಭಾರತೀಯ ದಂಪತಿ ಶವವಾಗಿ ಪತ್ತೆ..!
ನ್ಯೂಯಾರ್ಕ್ : ಅಮೇರಿಕಾದಲ್ಲಿ ಕೇರಳ ಮೂಲದ ದಂಪತಿ ಮತ್ತು ಅವರ 4 ವರ್ಷದ ಅವಳಿ ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ. ಸಂಬಂಧಿಕರು ಕರೆ ಮಾಡಿದಾಗ ರಿಸೀವ್ ಮಾಡದ ಕಾರಣ ಅವರು ಮನೆಗೆ ಬಂದಿದ್ದಾಗ ಘಟನೆ ಬೆಳಕಿಗೆ ಬಂದಿದ್ದು, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಮನೆಗೆ ಬಂದು ತಪಾಸಣೆ ನಡೆಸಿದಾಗ ದಂಪತಿ ಶವ ಬಾತ್ ರೂಮ್ನಲ್ಲಿ ಕಂಡುಬಂದಿದ್ದು ಜೊತೆಗೆ ಇಬ್ಬರು ಮಕ್ಕಳು ಕೋಣೆಯಲ್ಲಿ ಶವವಾಗಿದ್ದರು. ದಂಪತಿ ಮೈಮೇಲೆ ಗುಂಡಿನ ಗುರುತುಗಳು ಕಂಡುಬಂದಿದೆ. ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎನ್ನುವ ಕುರಿತು ನಿಖರ ಮಾಹಿತಿ ಲಭ್ಯವಾಗಿಲ್ಲ. ಆನಂದ್ ಸುಜಿತ್ ಹೆನ್ರಿ ಹಾಗೂ ಪತ್ನಿ ಆಲಿಸ್ ಪ್ರಿಯಾಂಕಾ ಮತ್ತು 4 ವರ್ಷದ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಕೇರಳ ಮೂಲದ ಈ ಕುಟುಂಬ ಕಳೆದ 9 ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿತ್ತು. ದಂಪತಿ ಮೈಮೇಲೆ ಗುಂಡಿನ ಗುರುತುಗಳಿದ್ದವು, ಮನೆಯಲ್ಲಿ ಯಾರೋ ಅಪರಿಚಿತರು ಬಂದಿರುವ ಯಾವುದೇ ಲಕ್ಷಣಗಳಿರಲಿಲ್ಲ. ಆದರೆ ಕಿಟಕಿ ತೆರೆದಿತ್ತು ಅಲ್ಲಿಂದ ಯಾರಾದರೂ ಮನೆಯ ಒಳಗೆ ಬಂದಿದ್ದರೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಬಾತ್ರೂಮ್ನಿಂದ 9 ಎಂಎಂ ಪಿಸ್ತೂಲ್ ಮತ್ತು ಲೋಡ್ ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರಂಭದಲ್ಲಿ ಇದು ಆತ್ಮಹತ್ಯೆ ಎಂದೆನಿಸದರೂ ಹತ್ಯೆ ಅನುಮಾನವನ್ನು ಕೂಡ ತಳ್ಳಿ ಹಾಕುವಂತಿಲ್ಲ. ಪೊಲೀಸರು ತನಿಖೆ ಮುಂದುವರೆದಿದ್ದಾರೆ.