LATEST NEWS
ಪ್ರಯಾಗ್ ರಾಜ್ ಮಹಾಕುಂಭಮೇಳದಲ್ಲಿ ಭಕ್ತ ಸಾಗರ – ಕಾಲ್ತುಳಿತಕ್ಕೆ 10ಕ್ಕೂ ಅಧಿಕ ಮಂದಿ ಸಾವಿನ ಶಂಕೆ
ಪ್ರಯಾಗ್ ರಾಜ್ ಜನವರಿ 29: ಮಹಾಕುಂಭ ಮೇಳದ ಮೌನಿ ಅಮಾವಾಸ್ಯೆ ವೇಳೆ ತ್ರಿವೇಣಿ ಸಂಗಮ ಕ್ಷೇತ್ರದಲ್ಲಿ ಪವಿತ್ರ ಸ್ನಾನಕ್ಕೆ ಭಕ್ತಸಾಗರವೇ ಹರಿದಿದೆ. ಮಂಗಳವಾರ ಮಧ್ಯರಾತ್ರಿಯ ಬಳಿಕ ಜನದಟ್ಟಣೆ, ನೂಕು ನುಗ್ಗಲಿನಿಂದಾಗಿ ಕಾಲ್ತುಳಿತ ಉಂಟಾಗಿದ್ದು, ಹಲವರು ಸಾವನಪ್ಪಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಜನವರಿ 13ರಂದು ಆರಂಭವಾದ ಮಹಾಕುಂಭ ಮೇಳಕ್ಕೆ ಈ ಬಾರಿ ಅತ್ಯಧಿಕ ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದು, ಇದುವರೆಗೆ ಸುಮಾರು 15 ಕೋಟಿ ಮಂದಿ ಸಂಗಮಕ್ಷೇತ್ರದಲ್ಲಿ ಪವಿತ್ರಸ್ನಾನ ಕೈಗೊಂಡಿದ್ದಾರೆ ಎಂದು ಮೂಲಗಳು ಹೇಳಿವೆ. ಮಹಾಕುಂಭ ಮೇಳ ನಡೆಯುತ್ತಿರುವ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಪ್ರತಿದಿನ ಲಕ್ಷಾಂತರ ಭಕ್ತರು ಪವಿತ್ರ ಸ್ನಾನ ಕೈಗೊಳ್ಳುತ್ತಿದ್ದಾರೆ. ಈ ನಡುವೆ ಇಂದು ಮೌನಿ ಅಮಾವಾಸ್ಯೆ ಇರುವ ಕಾರಣ ಎರಡನೇ ಅಮೃತ ಸ್ನಾನ ಕೈಗೊಳ್ಳಲು ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದು, ಕಾಲ್ತುಳಿತ ಸಂಭವಿಸಿದೆ ಎಂದು ವರದಿಯಾಗಿದೆ.
ಘಟನೆಯಲ್ಲಿ 17ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 50ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ‘ಕಾಲ್ತುಳಿತಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಂದ ಮಾಹಿತಿ ಪಡೆದಿದ್ದು. ಘಟನಾ ಸ್ಥಳದಲ್ಲಿ ಪರಿಸ್ಥಿತಿ ಅವಲೋಕಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ’ ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಮೃತಪಟ್ಟವರ ಬಗ್ಗೆ ಇನ್ನಷ್ಟೇ ಖಚಿತವಾಗಬೇಕಿದೆ.