LATEST NEWS
ಪ್ಯಾಲೆಸ್ತೀನ್ ನಲ್ಲಿ ನಡೆಯುತ್ತಿರುವುದು ಯದ್ಧವಲ್ಲ, ಸಾಮ್ರಾಜ್ಯಶಾಹಿ ಕ್ರೌರ್ಯ, ಭಾರತದ ನಾಗರಿಕರು ಈ ಅಮಾನವೀಯತೆಯ ವಿರುದ್ಧ ನಿಲ್ಲಬೇಕಿದೆ : ಮುನೀರ್ ಕಾಟಿಪಳ್ಳ
ಮಂಗಳೂರು : ಪ್ಯಾಲೆಸ್ತೀನ್ ನಲ್ಲಿ ನಡೆಯುತ್ತಿರುವುದು ಯದ್ಧವಲ್ಲ, ಸಾಮ್ರಾಜ್ಯಶಾಹಿ ಕ್ರೌರ್ಯ, ಭಾರತದ ನಾಗರಿಕರು ಈ ಅಮಾನವೀಯತೆಯ ವಿರುದ್ಧ ನಿಲ್ಲಬೇಕಿದೆ ಸಿಪಿಐಎಂ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ಹೇಳಿದರು.
ಅವರು ನಗರದ ಯೆಯ್ಯಾಡಿಯ ಸಣ್ಣ ಕೈಗಾರಿಕಾ ಸಂಘದ ಸಭಾಂಗಣದಲ್ಲಿ ನಿರ್ಮಿಸಲಾಗಿದ್ದ ಕಾ. ಸೀತಾರಾಮ್ ಯೆಚೂರಿ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಸಿಪಿಐಎಂ ಮಂಗಳೂರು ನಗರ ಉತ್ತರ ವಲಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ತಾಯ್ನೆಲದ ವಿಮೋಚನೆಗಾಗಿ ಹೋರಾಡುತ್ತಿರುವ ಪ್ಯಾಲೆಸ್ತೀನ್ ಜನತೆಯ ಮೇಲೆ ಇಸ್ರೇಲ್ ಬರ್ಬರ ಧಾಳಿ ನಡೆಸುತ್ತಿದೆ. ಯುದ್ಧ ವಿರಾಮಕ್ಕೆ ಆಗ್ರಹಿಸಿ, ನಾಗರಿಕರ ಮೇಲಿನ ಧಾಳಿಯ ವಿರುದ್ಧವಾಗಿ ವಿಶ್ವಸಂಸ್ಥೆ ತೆಗೆದುಕೊಂಡಿರುವ ನಿರ್ಣಯಗಳನ್ನೂ ಇಸ್ರೇಲ್ ತಿರಸ್ಕರಿಸಿದೆ. ಅಮೆರಿಕಾ ನೇತೃತ್ವದ ಸಾಮ್ರಾಜ್ಯಶಾಹಿ ಕೂಟದ ಬೆಂಬಲದಿಂದ ಇಸ್ರೇಲ್ ಮಹಿಳೆಯರು, ಮಕ್ಕಳು ಎಂದು ಪರಿಗಣಿಸದೆ ಪ್ಯಾಲೆಸ್ತೀನ್ ನಾಗರಿಕರ ನರಮೇಧ ನಡೆಸುತ್ತಿದೆ. ಪ್ಯಾಲೆಸ್ತೀನ್ ಬೆಂಬಲಕ್ಕೆ ನಿಂತ ಇರಾನ್, ಲೆಬನಾನ್, ಯೆಮನ್ ದೇಶಗಳ ಮೇಲೆಯೂ ಅಂತರಾಷ್ಟ್ರೀಯ ರಾಜತಾಂತ್ರಿಕ ನಿಯಮಗಳನ್ನು ಉಲ್ಲಂಘಿಸಿ ಧಾಳಿಗಳನ್ನು ಸಂಯೋಜಿಸುತ್ತಿದೆ.
ಇಸ್ರೇಲ್ ನ ಈ ರಕ್ತದಾಹ ಮೂರನೆ ವಿಶ್ವ ಯುದ್ಧ ದವಡೆಗೆ ಜಗತ್ತನ್ನು ತಳ್ಳುತ್ತಿದೆ ಎಂದರು. ಮುಂದುವರಿದು ಅವರು, ಇಸ್ರೇಲ್, ಪ್ಯಾಲೆಸ್ತೀನ್ ನಡುವೆ ನಡೆಯುತ್ತಿರುವುದು ಮುಸ್ಲಿಂ, ಯಹೂದಿ ಸಂಘರ್ಷ ಅಲ್ಲ, ಅದು ಅಮೆರಿಕಾ ನೇತೃತ್ವದ ಸಾಮ್ರಾಜ್ಯಶಾಹಿ ಶಕ್ತಿಗಳು ಜಗತ್ತನ್ನು ತನ್ನ ಬಿಗು ಹಿಡಿತದಲ್ಲಿ ಇರಿಸಿಕೊಳ್ಳಲು ನಡೆಸುತ್ತಿರುವ ಕಾರ್ಯಾಚರಣೆ. ಸ್ವಾತಂತ್ರ್ಯ ಪೂರ್ವದಿಂದಲೂ ಭಾರತದ ಜನತೆ ಪ್ಯಾಲೆಸ್ತೀನ್ ಪರವಾಗಿ ನಿಂತಿದ್ದಾರೆ. ಮಹಾತ್ಮಾ ಗಾಂಧಿ ಪ್ಯಾಲೆಸ್ತೀನ್ ಜನತೆಯ ಹೋರಾಟವನ್ನು ದೃಢವಾಗಿ ಬೆಂಬಲಿಸಿದ್ದರು. ಸ್ವತಂತ್ರ ಭಾರತ ಸರಕಾರ ಆರು ದಶಕಗಳ ಕಾಲ ಇಸ್ತೇಲ್ ದೇಶಕ್ಕೆ ಮಾನ್ಯತೆ ನೀಡದೆ, ಪ್ಯಾಲೆಸ್ತೀನ್ ಪರ ನಿಂತಿತ್ತು. ಈಗಲೂ ಭಾರತ ಸರಕಾರದ ನೀತಿ ಪ್ಯಾಲೆಸ್ತೀನ್ ಪರವಾಗಿಯೆ ಇದೆ. ಬಿಜೆಪಿ ಹಾಗೂ ಮೋದಿ ನಾಯಕತ್ವ ಅದನ್ನು ಮೀರಿ ಇಸ್ರೇಲ್ ಪರ ನಿಲ್ಲಲು ನೋಡುತ್ತಿದೆ. ಇದು ಖಂಡನಾರ್ಹ. ಪ್ಯಾಲೆಸ್ತೀನ್ ನಲ್ಲಿ ನಡೆಯುತ್ತಿರುವುದು ಯುದ್ಧದ ನೆಪದಲ್ಲಿ ಬರ್ಬರ ಕ್ರೌರ್ಯ, ಮಹಿಳೆಯರು, ಮಕ್ಕಳ ಸಹಿತ ಅಸಹಾಯಕ ನಾಗರಿಕರ ನರಮೇಧ. ಈ ಸಾಮ್ರಾಜ್ಯಶಾಹಿ ಕ್ರೌರ್ಯದ ವಿರುದ್ಧ ಭಾರತದ ನಾಗರಿಕರು ನಿಲ್ಲಬೇಕಿದೆ ಎಂದು ಅವರು ಹೇಳಿದರು.
ಆರಂಭದಲ್ಲಿ ಕೊಂಚಾಡಿ ಸಿಪಿಐಎಂ ಕಚೇರಿಯಿಂದ ಸಮ್ಮೇಳನ ಸಭಾಂಗಣವರಗೆ ಕೆಂಪು ಬಟ್ಟೆ ಧರಿಸಿದ ಕಾರ್ಯಕರ್ತರು ಧ್ವಜ ಮೆರವಣಿಗೆ ನಡೆಸಿದರು. ಹಿರಿಯ ಮುಂದಾಳು ತಿಮ್ಮಯ್ಯ ಕೊಂಚಾಡಿ ಧ್ವಜಾರೋಹಣ ನಡೆಸಿದರು. ಗೋಪಾಲ ಕೊಂಚಾಡಿ ಅಧ್ಯಕ್ಷತೆ ವಹಿಸಿದ್ದರು. ಶ್ರದ್ದಾಂಜಲಿ ನಿರ್ಣಯವನ್ನು ವಲಯ ಕಾರ್ಯದರ್ಶಿ ಪ್ರಮೀಳಾ ಕೆ ಮಂಡಿಸಿದರು. ರವಿಚಂದ್ರ ಕೊಂಚಾಡಿ ಕಾರ್ಯಕ್ರಮ ನಿರೂಪಿಸಿದರು. ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ವಸಂತ ಆಚಾರಿ, ಡಾ. ಕೃಷ್ಣಪ್ಪ ಕೊಂಚಾಡಿ, ಸ್ಥಳೀಯ ಮುಂದಾಳುಗಳಾದ ನವೀನ್ ಕೊಂಚಾಡಿ, ಶಶಿಧರ್ ಗುಂಡಳಿಕೆ, ದಯಾನಂದ ಶೆಟ್ಟಿಗಾರ್, ನಿತಿನ್ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.