LATEST NEWS
ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ – ಕರ್ನಾಟಕ ಮತ್ತು ಮಹರಾಷ್ಟ್ರಕ್ಕೆ ಭಾರೀ ಮಳೆ ಎಚ್ಚರಿಕೆ

ಮಂಗಳೂರು ಮೇ 23: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿ ಚಂಡಮಾರುತದ ಭೀತಿ ಉಂಟಾಗಿದ್ದು, ಈ ಹಿನ್ನಲೆ ಕರ್ನಾಟಕದ ಕರಾವಳಿ ಸೇರಿದಂತೆ ಮಹಾರಾಷ್ಟದ ಕರಾವಳಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಈಗಾಗಲೇ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆಯ ಜೊತೆ ಗಾಳಿ ಅಬ್ಬರವೂ ಜೋರಾಗಿದೆ. ಇನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಗುರುವಾರ ಮಳೆಯ ಬಿರುಸು ತಗ್ಗಿದ್ದು, ಕೆಲವು ಕಡೆಗಳಲ್ಲಿ ಮಾತ್ರ ಬಿಟ್ಟು ಬಿಟ್ಟು ಮಳೆಯಾಗಿದೆ. ಬುಧವಾರಕ್ಕೆ ಹೋಲಿಸಿದರೆ ಕರಾವಳಿಯಲ್ಲಿ ಗಾಳಿ-ಮಳೆಯ ಆರ್ಭಟ ಕಡಿಮೆ ಇತ್ತು. ಬೆಳಗ್ಗೆ ವೇಳೆ ಕೆಲವು ಕಡೆ ಮಳೆ ಸುರಿದಿದೆ. ಬಳಿಕ ಮೋಡ ಮತ್ತು ತುಸು ಬಿಸಿಲಿನ ವಾತಾವರಣ ಇತ್ತು. ಮಂಗಳೂರಿನಲ್ಲಿ ಮೋಡ-ಬಿಸಿಲಿನಿಂದ ಕೂಡಿತ್ತು. ಉಡುಪಿಯಲ್ಲಿ ಸಂಜೆ ಮತ್ತು ರಾತ್ರಿಯ ವೇಳೆಗೆ ಉತ್ತಮ ಮಳೆಯಾಗಿದೆ.

ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಕರಾವಳಿಯಲ್ಲಿ ಮೇ 23 ರಂದು ಆರೆಂಜ್ ಅಲರ್ಟ್, 24ರಂದು ರೆಡ್ ಅಲರ್ಟ್ ಮತ್ತು 25ರಿಂದ 28ರ ವರೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ವೇಳೆ ಬಿರುಸಿನಿಂದ ಕೂಡಿದ ಗಾಳಿ-ಮಳೆಯಾಗುವ ಸಾಧ್ಯತೆ ಇದೆ. ಇಂದು ಮಂಗಳೂರಿನಲ್ಲಿ ಬೆಳ್ಳಂಬೆಳಿಗ್ಗೆ ಸುರಿದ ಭಾರೀ ಮಳೆಯಿಂದಾಗಿ ವಾಮಂಜೂರು ಕಂದಾಯ ಇಲಾಖೆ ಗ್ರಾಮ ಆಡಳಿತ ಅಧಿಕಾರಿಗಳ ಕಛೇರಿ ಮೇಚ್ಚಾವಣಿ ಹಂಚು ಹಾರಿ ಹೋಗಿ ಹಾನಿಯಾಗಿದೆ.