LATEST NEWS
ಕಾರ್ಕಳದ ಬೆಳ್ಮಣ್ಣನಲ್ಲಿ ಪತನಗೊಂಡ ಗಾಳಿಯ ಗುಣಮಟ್ಟ ಅಳೆಯುವ ಸಾಧನ ಎಸ್ ಜಿ-20 ಎ ಜಿಪಿಎಸ್
ಕಾರ್ಕಳದ ಬೆಳ್ಮಣ್ಣನಲ್ಲಿ ಪತನಗೊಂಡ ಗಾಳಿಯ ಗುಣಮಟ್ಟ ಅಳೆಯುವ ಸಾಧನ ಎಸ್ ಜಿ-20 ಎ ಜಿಪಿಎಸ್
ಕಾರ್ಕಳ ನವೆಂಬರ್ 16: ಕಾರ್ಕಳದ ಬೆಳ್ಮಣ್ಣ ಸಮೀಪದ ಮನೆಯ ಮಂದಿಗೆ ಇವತ್ತು ಬೆಳ್ಳಂಬೆಳಿಗ್ಗೆ ಅಪರೂಪದ ವಸ್ತು ಒಂದು ಕಾಣ ಸಿಕ್ಕಿದೆ. ಸಣ್ಣ ಪ್ಯಾರಾಚೂಟ್ ಮಾದರಿಯ ವಸ್ತು ತೋಟದಲ್ಲಿ ಬಿದ್ದಿದ್ದನ್ನು ನೋಡಿ ಜನ ಭಯಭೀತರಾಗಿದ್ದರು.
ಇದೆಲ್ಲಾ ನಡೆದಿದ್ದು, ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೋಳ ಗ್ರಾಮದ ನಿವಾಸಿ ಕಿಶೋರ್ ಅವರ ಮನೆಯ ತೋಟದಲ್ಲಿ. ದೊಡ್ಡ ಬಿಳಿ ಬಣ್ಣದ ಬಲೂನ್ ನೇತಾಡುತ್ತಿತ್ತು. ಬಲೂನ್ ಜೊತೆಗೆ ಬಂದಿದ್ದ ರಿಸಿವರ್ ನಂತಹ ಉಪಕರಣ ನೆಲದಲ್ಲಿ ಬಿದ್ದಿತ್ತು. ಸ್ಥಳೀಯರಿಗೆ ಮಾಹಿತಿ ಸಿಕ್ಕ ತಕ್ಷಣವೇ ಜನರು ಬಂದು ನೋಡಲಾರಂಭಿಸಿದ್ದಾರೆ.
ಬೋಳ ಗ್ರಾಮದ ಕಿಶೋರ್ ಅವರ ಮನೆಯ ಬಳಿ ಬಂದು ಬಿದ್ದಿದ್ದು ಆರ್ ಎಸ್ ಜಿ-20 ಎ ಜಿಪಿಎಸ್ ರೇಡಿಯೋ ಅನ್ವೇಷಕ ಎಂಬ ಸಾಧನ. ಇದನ್ನು ಗಾಳಿಯ ಗುಣಮಟ್ಟ ಅಳೆಯಲು ಬಳಸಲಾಗುತ್ತದೆ. ದೊಡ್ಡದಾದ ಗಾಳಿ ಬಲೂನಿಗೆ ಅನ್ವೇಷಕ ಉಪಕರಣವನ್ನು ಕಟ್ಟಿ ಗಾಳಿಯಲ್ಲಿ ತೇಲಿ ಬಿಡಲಾಗುತ್ತದೆ.
ಇದು ನೆಲದಿಂದ ಮೇಲಕ್ಕೆ ಹಾರಾಡುತ್ತಾ ವಿವಿಧ ಸ್ಥರಗಳ ಹವಾಮಾನ, ಗಾಳಿಯ ವೇಗ, ಉಷ್ಣಾಂಶ, ಆದ್ರತೆ, ಗಾಳಿಯ ಒತ್ತಡವನ್ನು ಲೆಕ್ಕಾಚಾರ ಹಾಕಿ ತನ್ನ ಕೇಂದ್ರಕ್ಕೆ ಕಳುಹಿಸಿಕೊಡುತ್ತದೆ. ಕರ್ನಾಟಕದ ಎರಡು ಕಡೆ ಈ ಉಪಕರಣವನ್ನು ಹಾರಿ ಬಿಡಲಾಗುತ್ತದೆ. ಮಂಗಳೂರು ಮತ್ತು ಬೆಂಗಳೂರಿನಲ್ಲಿ ಮಾತ್ರ ಈ ಉಪಕರಣ ಹಾರಿ ಬಿಟ್ಟು ಮಾಹಿತಿ ಸಂಗ್ರಹಿಸುವ ಹವಾಮಾನ ಇಲಾಖೆಗೆ ಸೇರಿದ ಕೇಂದ್ರವಿದೆ.
ದೇಶವ್ಯಾಪಿಯಾಗಿ ಒಟ್ಟು 36 ಹವಾಮಾನ ಕೇಂದ್ರಗಳಿದ್ದು, ಏಕಕಾಲದಲ್ಲಿ ಬೆಳಿಗ್ಗೆ 4.30ಕ್ಕೆ ಈ ಉಪಕರಣವನ್ನು ಹಾರಿಬಿಡಲಾಗುತ್ತದೆ. ಈ ಮೂಲಕ ಮಾಹಿತಿ ಪಡೆದುಕೊಳ್ಳಲಾಗುತ್ತದೆ.
ಸಾಮಾನ್ಯವಾಗಿ ಈ ಉಪಕರಣಗಳು ಸಮುದ್ರ ಅಥವಾ ಜನವಸತಿ ರಹಿತ ಸ್ಥಳಗಳಲ್ಲಿ ಪತನಗೊಳ್ಳುತ್ತದೆ. ಅಪರೂಪದ ಪ್ರಕರಣಗಳಲ್ಲಿ ಮಾತ್ರ ಹೀಗೆ ಜನವಸತಿ ಕೇಂದ್ರಗಳಲ್ಲಿ ಬೀಳುತ್ತದೆ. ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಪೊಲೀಸರು, ಗ್ರಾಮ ಕಂದಾಯ ನಿರೀಕ್ಷಕರು ಭೇಟಿ ನೀಡಿದರು. ನಂತರ ಕಂದಾಯ ಇಲಾಖೆಗೆ ಹಸ್ತಾಂತರಿಸಲಾಯಿತು.