LATEST NEWS
ಬಾಲಕನ ಬಲಿ ತೆಗೆದುಕೊಂಡ ಅಕ್ರಮ ಮರಳುಗಾರಿಕೆ
ಬಾಲಕನ ಬಲಿ ತೆಗೆದುಕೊಂಡ ಅಕ್ರಮ ಮರಳುಗಾರಿಕೆ
ಮಂಗಳೂರು ಜನವರಿ 29: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಟಕ್ಕೆ ಬಾಲಕನೊಬ್ಬ ಬಲಿಯಾಗಿದ್ದಾನೆ.
ಕೊಣಾಜೆ ಪೋಲೀಸ್ ಠಾಣಾ ವ್ಯಾಪ್ತಿಯ ಬೋಳಿಯಾರ್ ಸಮೀಪದ ಚೇಳೂರು ಎಂಬಲ್ಲಿ ಈ ಘಟನೆ ನಡೆದಿದ್ದು, ಸಜಿಪ ಭಾಗದಿಂದ ಪಿಕ್ ಅಪ್ ವಾಹನದಲ್ಲಿ ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಪೋಲೀಸರು ಈ ವಾಹನವನ್ನು ಬೆನ್ನಟ್ಟಿದ್ದಾರೆ. ಆದರೆ ಪೋಲೀಸರ ಸೂಚನೆಯನ್ನು ಧಿಕ್ಕರಿಸಿ ಮುಡಿಪು ಕಡೆ ಸಾಗಿದ ಪಿಕ್ ಅಪ್ ಚಾಲಕ ಇಸ್ಮಾಯಿಲ್ ಎರ್ರಾಬಿರ್ರಿ ವಾಹನ ಚಲಾಯಿಸಿ ಶಾಲೆಗೆ ಹೊರಡುತ್ತಿದ್ದ ಬಾಲಕನಿಗೆ ಡಿಕ್ಕಿ ಹೊಡೆದಿದ್ದಾನೆ. ಮನೆಯಿಂದ ರಸ್ತೆಗೆ ಇಳಿಯುತ್ತಿದ್ದ ಬಾಲಕ ಪ್ರತೀಶ್ (8) ಗಂಭೀರ ಗಾಯಗೊಂಡ ಹಿನ್ನಲೆಯಲ್ಲಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಜಿಲ್ಲೆಯಲ್ಲಿ ಮತ್ತೆ ಅಕ್ರಮ ಮರಳು ಮಾಫಿಯಾ ತಲೆ ಎತ್ತಲಾರಂಭಿಸಿದ್ದು, ತಮ್ಮ ವಾಹನವನ್ನು ತಡೆಗಟ್ಟುವ ಪೋಲೀಸರನ್ನೂ ಈ ಮರಳು ಸಾಗಾಟ ಲಾರಿಗಳು ಕ್ಯಾರೇ ಮಾಡುತ್ತಿಲ್ಲ ಎನ್ನುವುದಕ್ಕೆ ಈ ಘಟನೆಯೂ ಒಂದು ಉದಾಹರಣೆಯಾಗಿದೆ.
ಜಿಲ್ಲೆಯಲ್ಲಿ ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿರುವ ಬಹುತೇಕ ಎಲ್ಲಾ ವಾಹನಗಳ ಹಿಂಭಾಗದಲ್ಲಿ ನಂಬರ್ ಪ್ಲೇಟ್ ಗಳೂ ಇಲ್ಲದ ಕಾರಣ ಅಫಘಾತ ಇಲ್ಲವೇ ಇನ್ನಿತರ ಕಾನೂನುಬಾಹಿರ ಕೃತ್ಯ ನಡೆಸಿ ಈ ವಾಹನಗಳು ನಿರಾಯಾಸವಾಗಿ ತಪ್ಪಿಸಿಕೊಳ್ಳುತ್ತಿವೆ.
ಚೇಳೂರು ನಲ್ಲಿ ಇಂದು ನಡೆದ ಅಫಘಾತ ಸಂದರ್ಭದಲ್ಲಿ ಸಾರ್ವಜನಿಕರು ನೆರೆದಿದ್ದ ಕಾರಣ ವಾಹನವನ್ನು ತಡೆ ಹಿಡಿಯಲು ಸಾಧ್ಯವಾಗಿದ್ದು, ಜನ ಇಲ್ಲದೇ ಹೋದಲ್ಲಿ ಈ ವಾಹನವೂ ಸದ್ದಿಲ್ಲದೆ ಹೋಗುವ ಸಾಧ್ಯತೆಯೂ ಇತ್ತು. ಪರಂಗಿಪೇಟೆ, ಸಜಿಪ ಮೊದಲಾದ ಕಡೆಗಳಲ್ಲಿ ಅಕ್ರಮ ಮರಳು ಸಾಗಾಟ ಮಿತಿ ಮೀರುತ್ತಿದ್ದು ಅಕ್ರಮ ತಡೆಯಬೇಕಿದ್ದ ಇಲಾಖೆಗಳು ಹಾಗೂ ಜನಪ್ರತಿನಿಧಿಗಳ ಅಭಯಹಸ್ತ ಈ ಕುಳಗಳ ಮೇಲಿರುವ ತನಕ ಇಂಥಹ ಘಟನೆಗಳನ್ನು ಜಿಲ್ಲೆಯ ಜನ ಇನ್ನಷ್ಟು ನೋಡಬೇಕಾದ ಸ್ಥಿತಿಯೂ ಇದೆ.