Connect with us

    LATEST NEWS

    ಕೊಂಕಣ್ ರೈಲ್ವೆಯ ರೂವಾರಿ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್ ಇನ್ನಿಲ್ಲ

    ಕೊಂಕಣ್ ರೈಲ್ವೆಯ ರೂವಾರಿ ಮಾಜಿ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡೀಸ್ ಇನ್ನಿಲ್ಲ

    ಮಂಗಳೂರು ಜನವರಿ 29: ಕರಾವಳಿಯ ಜೀವನಾಡಿಯಾಗಿರುವ ಕೊಂಕಣ್ ರೈಲ್ವೆಯ ರೂವಾರಿ ಮಾಜಿ ರಕ್ಷಣಾ ಸಚಿವ, ಧೀಮಂತ ನಾಯಕ, ಕಾರ್ಮಿಕರ ಹಿತರಕ್ಷಣೆಗೆ ಪಣತೊಟ್ಟು ಹೋರಾಡಿದ ಜಾರ್ಜ್ ಫರ್ನಾಂಡೀಸ್ ಇಂದು ನಿಧನರಾಗಿದ್ದಾರೆ. ಜಾರ್ಜ್ ಫೆರ್ನಾಂಡಿಸ್ ಅವರಿಗೆ 88 ವರ್ಷ ವಯಸ್ಸಾಗಿತ್ತು. ಅವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜಾರ್ಜ್ ಫರ್ನಾಂಡಿಸ್ ವಿಧಿವಶರಾಗಿದ್ದಾರೆ.

    ಮಂಗಳೂರಿನಲ್ಲಿ 1930ರಲ್ಲಿ ರೋಮನ್‌ ಕ್ಯಾಥೋ­ಲಿಕ್‌ ಕುಟುಂಬದಲ್ಲಿ ಜಾರ್ಜ್ ಫರ್ನಾಂಡಿಸ್ ಜನಿಸಿದರು. ಚಿಕ್ಕಂದಿನಿಂದಲೇ ಹೋರಾಟದ ಮನೋಭಾವ ಬೆಳಿಸಿಕೊಂಡಿದ್ದ ಜಾರ್ಜ್ ಫೆರ್ನಾಂಡಿಸ್ ಮಂಗಳೂರಿನ ಹಂಪನಕಟ್ಟದ ಫೆಲಿಕ್ಸ್ ಪೈ ಬಜಾರ್ ರೆಡಿಯೋ ಉದ್ಯಾನವನದಿಂದ ಹೋರಾಟ ಬದುಕು ಆರಂಭಿಸಿದ ಅವರು ಡಾ.­ಲೋಹಿ­ಯಾ ಅವರ ಪ್ರಭಾವಕ್ಕೆ ಒಳಗಾಗಿ ಸಮಾಜವಾದಿಯಾದರು. ಉದ್ಯೋಗ ಅರಸಿ ಮುಂಬೈ­ಗೆ ತೆರಳಿದ ಅವರು ಅನೇಕ ಹೋರಾಟಗಳಲ್ಲಿ ಭಾಗ­ವಹಿಸಿದರು.

    ಜನತಾ ದಳದ ಹಿರಿಯ ಸದಸ್ಯರಾಗಿದ್ದ ಅವರು ಮುಂದೆ ಸಮತಾ ಪಕ್ಷ ಸ್ಥಾಪಿಸಿದರು. ಅಖಿಲ ಭಾರತ ರೈಲ್ವೆ ಫೆಡರೇಷ­ನ್‌ನ ಮುಖಂಡ­ರಾಗಿ 1974ರಲ್ಲಿ ಅವರು ಸಂಘಟಿಸಿದ ಮುಷ್ಕರ ತೀವ್ರ ಸ್ವರೂಪ ಪಡೆದು ಇಂದಿರಾ ಗಾಂಧಿ ಅವರ ಸರ್ಕಾ­ರಕ್ಕೆ ಸವಾಲಾಗಿ ಪರಿಣಮಿಸಿತು. ಈ ಹಿನ್ನೆಲೆಯಲ್ಲಿ ಇಂದಿರಾ ಅವರು ದೇಶದಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಘೋಷಿಸಿ ಇವರನ್ನು ಬಂಧಿಸಿದರು.

    1977ರಲ್ಲಿ ನಡೆದ ಮಹಾಚುನಾವಣೆ­ಯಲ್ಲಿ ಜಾರ್ಜ್‌ ಅವರು ಬಿಹಾರದ ಮುಜಫರ್‌ನ­ಗರದಿಂದ ಸ್ಪರ್ಧಿಸಿ 3 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿ ಕೇಂದ್ರ ಸಚಿವರಾದರು.

    ಆ ಸಮಯ­ದಲ್ಲಿ ಜಾರ್ಜ್‌ ಅವರು ವಿದೇಶಿ ವಿನಿ­ಮಯ ನಿಯಂತ್ರಣ ಕಾಯ್ದೆಯನ್ನು ಕಟ್ಟು­ನಿಟ್ಟಾಗಿ ಜಾರಿಗೆ ತಂದಾಗ ಬಹು­ರಾಷ್ಟ್ರೀಯ ಕಂಪೆನಿಗಳಾದ ಐಬಿಎಂ ಮತ್ತು ಕೋಕಾಕೋಲ ಭಾರತದಿಂದ ಕಾಲ್ತೆಗೆದವು. ವಿ.ಪಿ.ಸಿಂಗ್‌ ಅವರ ಸರ್ಕಾರ­ದಲ್ಲಿ ರೈಲ್ವೆ ಮಂತ್ರಿಯಾಗಿದ್ದ ಇವರು ಕೊಂಕಣ ರೈಲ್ವೆ ಯೋಜನೆಗೆ ಜೀವ ಕೊಟ್ಟರು. ಎನ್‌ಡಿಎ ಸರ್ಕಾರದ ಅವಧಿಯಲ್ಲಿ ರಕ್ಷಣಾ ಮಂತ್ರಿಯಾ­ಗಿದ್ದರು. ಪ್ರಖರ ಭಾಷಣಗಳಿಗೆ ಇವರು ದೇಶದಾದ್ಯಂತ ಹೆಸರಾಗಿದ್ದರು.

    ಇವರು ಇವರು ಕಾರ್ಮಿಕ ಸಂಘಟನೆಯ ನೇತಾರ, ಕೃಷಿಕ, ಸಾಮಾಜಿಕ ಕಾರ್ಯಕರ್ತ ಮತ್ತು ಪತ್ರಕರ್ತರಾಗಿದ್ದ ಅಪರೂಪದ ಸಂಸದರಾಗಿದ್ದರು.

    ಬಹು ಅಂಗಾಂಗಗಳ ತೊಂದರೆಯಿಂದ ಜಾರ್ಜ್ ಫರ್ನಾಂಡಿಸ್ ಬಳಲುತ್ತಿದ್ದು, ಸಂಪೂರ್ಣ ವಿಶ್ರಾಂತಿಯಲ್ಲಿದ್ದರು. ದೆಹಲಿಯ ಅನೇಕ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ.

    ಮೊದಲಿಗೆ ಅವರು ಮೂತ್ರನಾಳದ ಸಮಸ್ಯೆಯಿಂದ ಬಳಲುತ್ತಿದ್ದರು. ಬಳಿಕ ಒಂದೊಂದೆ ಅಂಗಾಂಗ ವೈಫಲ್ಯವಾಗಿದ್ದು, ಇಂದು ಕೊನೆ ಉಸಿರೆಳೆದಿದ್ದಾರೆ. ಜಾರ್ಜ್ ಫರ್ನಾಂಡಿಸ್ ಅವರು ವಾಜಪೇಯಿ ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದರು. ತಮ್ಮ ಸಾಮಾಜಿಕ ಕೆಲಸಗಳಿಂದಲೇ ಒರ್ವ ಜನನಾಯಕನಾಗಿ ಗುರುತಿಸಿಕೊಂಡಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply