LATEST NEWS
ಮಂಗಳೂರು ವಿಮಾನ ನಿಲ್ದಾಣದಿಂದ ಕಣ್ಣೂರಿಗೆ ಶಿಫ್ಟ್ ಆದ ಅಕ್ರಮ ಚಿನ್ನ ಸಾಗಾಟ

ಮಂಗಳೂರು ವಿಮಾನ ನಿಲ್ದಾಣದಿಂದ ಕಣ್ಣೂರಿಗೆ ಶಿಫ್ಟ್ ಆದ ಅಕ್ರಮ ಚಿನ್ನ ಸಾಗಾಟ
ಮಂಗಳೂರು ಡಿಸೆಂಬರ್ 27: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆಯುತ್ತಿದ್ದ ಅಕ್ರಮ ಚಿನ್ನ ಸಾಗಾಟ ಪ್ರಕರಣ ಈಗ ಹೊಸದಾಗಿ ನಿರ್ಮಾಣವಾಗಿರುವ ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಿಫ್ಟ್ ಆಗಿದೆ.
ಇದೇ ತಿಂಗಳು ಉದ್ಘಾಟನೆಗೊಂಡ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿದೇಶದಿಂದ 2 ಕೆ.ಜಿ ಚಿನ್ನ ಕಳ್ಳ ಸಾಗಾಟದ ಮೊದಲ ಪ್ರಕರಣ ನಡೆದಿದೆ.

ದುಬೈಯಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಬಂದಿಳಿದ ಕಣ್ಣೂರು ಪಿಣರಾಯಿ ನಿವಾಸಿ ಮೊಹಮ್ಮದ್ ಶಾನ್ ಎಂಬಾತನನ್ನು ಏರ್ ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿದಾಗ ಆತನ ಬಳಿಯಿದ್ದ ಮೈಕ್ರೊವೇವ್ ಓವನ್‌ನಲ್ಲಿ ಚಿನ್ನ ಅಡಗಿಸಿಟ್ಟಿರುವುದು ಪತ್ತೆಯಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಮೊಹಮ್ಮದ್ ಶಾನ್ ದುಬೈಯಿಂದ ತಂದ ಚಿನ್ನ ಪಡೆದುಕೊಳ್ಳಲು ನಿಲ್ದಾಣದ ಹೊರಗೆ ಕೆಲವು ಯುವಕರು ಕಾರಿನಲ್ಲಿ ಕಾಯುತ್ತಿದ್ದು, ಅವರನ್ನೂ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಚಿನ್ನ ಕಳ್ಳ ಸಾಗಾಟದಲ್ಲಿ ಕಾಸರಗೋಡು ಮೂಲದ ತಂಡವೊಂದು ಕಾರ್ಯಾಚರಿಸುತ್ತಿರುವುದಾಗಿ ಕಸ್ಟಮ್ಸ್ ವಿಭಾಗಕ್ಕೆ ಮಾಹಿತಿ ಲಭಿಸಿದೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅತೀ ಹೆಚ್ಚು ಅಕ್ರಮ ಚಿನ್ನ ಸಾಗಾಟ ಪ್ರಕರಣಗಳು ಪತ್ತೆಯಾಗುತ್ತಿತ್ತು. ಹೆಚ್ಚಾಗಿ ಕೇರಳ ನಿವಾಸಿಗಳು ಈ ಅಕ್ರಮದಲ್ಲಿ ಭಾಗಿದ್ದರು. ಈಗ ಅಕ್ರಮ ಚಿನ್ನ ಸಾಗಾಟ ಕೇರಳದ ಹೊಸದಾಗಿ ನಿರ್ಮಾಣಗೊಂಡಿರುವ ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಿಫ್ಟ ಆಗಿದೆ.