LATEST NEWS
ಹೈಜಾಕ್ ಆಗಿದೆಯಾ ಮಲ್ಪೆ ಆಳಸಮುದ್ರ ಮೀನುಗಾರಿಕೆ ಬೋಟ್ ?
ಹೈಜಾಕ್ ಆಗಿದೆಯಾ ಮಲ್ಪೆ ಆಳಸಮುದ್ರ ಮೀನುಗಾರಿಕೆ ಬೋಟ್ ?
ಮಂಗಳೂರು: ಇಲ್ಲಿನ ಮಲ್ಪೆ ಬಂದರಿನಿಂದ ಆಳಸಮುದ್ರಕ್ಕೆ ಡಿಸೆಂಬರ್ 13 ರಂದು ಮೀನುಗಾರಿಕೆಗೆ ಹೊರಟಿದ್ದ ಬೋಟ್ ನಾಪತ್ತೆಯಾಗಿ ಇಂದಿಗೆ 12 ದಿನ ಕಳೆದರೂ ಮೀನುಗಾರರು ಪತ್ತೆಯಾಗಿಲ್ಲ. ಅರಬ್ಬೀ ಸಮುದ್ರದ ನಡುವಿನಿಂದ ಬೋಟ್ ಸಮೇತ ಮೀನುಗಾರರನ್ನು ಹೈಜಾಕ್ ಮಾಡಿರಬಹುದು ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಶಂಕೆ ವ್ಯಕ್ತಪಡಿಸಿದ್ದಾರೆ.
ಡಿಸೆಂಬರ್ 13ರಂದು ರಾತ್ರಿ 11ಕ್ಕೆ ಒಟ್ಟು 6 ಬೋಟ್‌ಗಳು ಒಟ್ಟಿಗೆ ಮೀನುಗಾರಿಕೆಗೆ ತೆರಳಿದ್ದು, ಡಿಸೆಂಬರ್ 15ರಂದು 5 ಬೋಟ್‌ಗಳು ವಾಪಸ್ ಬಂದಿವೆ. ನಾಪತ್ತೆಯಾದ ಬೋಟ್‌ನಲ್ಲಿದ್ದವರ ಮೊಬೈಲ್ ಸಿಗ್ನಲ್ ಡಿಸೆಂಬರ್ 15ರ ಮಧ್ಯರಾತ್ರಿ 1 ಗಂಟೆವರೆಗೆ ಸಂಪರ್ಕದಲ್ಲಿದ್ದು, ಮಹಾರಾಷ್ಟ್ರದ ಗಡಿಯಲ್ಲಿ ಕೊನೆಯ ಲೊಕೇಶನ್ ತೋರಿಸಿದೆ. ಬಳಿಕ ಸ್ವಿಚ್ಡ್‌ಆಫ್ ಆಗಿದೆ ಎಂದು ಬಿಎಸ್‌ಎನ್‌ಎಲ್ ಮೂಲಗಳು ತಿಳಿಸಿವೆ.
ನಾಪತ್ತೆಯಾದವರಿಗೆ ಮಂಗಳೂರು, ಗೋವಾದ ಕರಾವಳಿ ಕಾವಲು ಪಡೆ ತೀವ್ರ ಶೋಧ ನಡೆಸುತ್ತಿದ್ದರೂ ಮೀನುಗಾರರು ಮಾತ್ರ ಪತ್ತೆಯಾಗಿಲ್ಲ. ಮೀನುಗಾರಿಕೆಗೆ ತೆರೆಳಿದ್ದ ಬೋಟ್ ಗೆ ಅಳವಡಿಸಿದ್ದ ಜಿಪಿಎಸ್ ಸಂಪರ್ಕಕ್ಕೆ ಸಿಗುತ್ತಿಲ್ಲ.
ಬೋಟ್‌ನಲ್ಲಿ ಕಲರ್‌ಕೋಡಿಂಗ್ ವ್ಯವಸ್ಥೆ ಇರುವುದರಿಂದ ಪತ್ತೆ ಹಚ್ಚುವಲ್ಲಿ ಸಹಕಾರಿಯಾಗುತ್ತದೆ. ಮೂಲಗಳ ಪ್ರಕಾರ ಬೋಟ್ ಹೈಜಾಕ್ ಆಗಿರುವ ಶಂಕೆ ಇದೆ. ಈ ಬಗ್ಗೆ ತನಿಖೆ, ಕಾರ್ಯಾಚರಣೆ ಮುಂದುವರೆದಿದೆ. ನೇವಿ ಹಾಗೂ ಮಂಗಳೂರು, ಗೋವಾ, ಮಹಾರಾಷ್ಟ್ರ ಕೋಸ್ಟ್‌ಗಾರ್ಡ್ ಸಹಕಾರದಲ್ಲಿ ಹುಡುಕಾಟ ಕಾರ್ಯಾಚರಣೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಎರಡು ಕೋಸ್ಟ್‌ಗಾರ್ಡ್ ಡಾರ್ನಿಯರ್ ಕ್ರಾಫ್ಟ್ ವಿಮಾನ, ಕಾರವಾರದಿಂದ ಒಂದು ಇಂಟರ್‌ಸೆಪ್ಟರ್ ಬೋಟ್, ಗೋವಾದಿಂದ ಹಾಗೂ ಲಕ್ಷದ್ವೀಪದಿಂದ ತಲಾ ಒಂದು ವೇಗದ ಗಸ್ತು ಹಡಗುಗಳು ಕಾರ್ಯಾಚರಣೆ ನಡೆಸಿವೆ. ಕರಾವಳಿಯ ಮೂರು ಜಿಲ್ಲೆಗಳ ಜಿಲ್ಲಾಡಳಿತವೂ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಪತ್ತೆಗೆ ಪ್ರಯತ್ನ ಮುಂದುವರಿದಿದೆ. ನಾಪತ್ತೆಯಾಗಿರುವ ಬೋಟ್ ಪತ್ತೆ ಕುರಿತು ನಿಗಾ ವಹಿಸುವಂತೆ ಕರಾವಳಿ ಪ್ರದೇಶದಲ್ಲಿ ಸಂಚರಿಸುವ ಪ್ರಯಾಣಿಕ ಹಡಗು ಮತ್ತು ಮೀನುಗಾರಿಕಾ ಬೋಟ್‌ಗಳಿಗೂ ಸೂಚನೆ ನೀಡಲಾಗಿದೆ ಎಂದು ಕೋಸ್ಟ್‌ಗಾರ್ಡ್ ಕರ್ನಾಟಕ ಡಿಐಜಿ ಸುರೇಂದ್ರ ಸಿಂಗ್ ದಾಸಿಲ್ಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.