DAKSHINA KANNADA
ಮಾರುತಿ ಓಮ್ನಿಯಲ್ಲಿ ಅಕ್ರಮವಾಗಿ ದನದ ಕರು ಸಾಗಾಟ ಇಬ್ಬರು ಆರೋಪಿಗಳ ಬಂಧನ.
ಪುತ್ತೂರು ಸೆಪ್ಟೆಂಬರ್ 4: ಕೇರಳಕ್ಕೆ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪುತ್ತೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಕಾಸರಗೋಡು ಬಂದಡ್ಕ ನಿವಾಸಿ ಶಿವಪ್ರಸಾದ್ ಭಟ್ ಮತ್ತು ಬಂದಡ್ಕದ ಮಾಣಿಮೂಲೆ ನಿವಾಸಿ ಚಂದ್ರನ್ ಎಂದು ಗುರುತಿಸಲಾಗಿದೆ.
ಹಿಂದೂ ಜಾಗರಣಾ ವೇದಿಕೆ ಸಂಘಟನೆಯ ಮಾಹಿತಿಯಂತೆ ಪೊಲೀಸರು ನರಿಮೊಗರು ಗ್ರಾಮದ ಪುರುಷರಕಟ್ಟೆಯಲ್ಲಿ ನರಿಮೊಗರು ಕಡೆಯಿಂದ ಬರುತ್ತಿರುವ ಮಾರುತಿ ಓಮ್ನಿಯನ್ನು ತಡೆದು ತಪಾಸಣೆ ನಡೆಸಿದಾಗ ಓಮ್ನಿಯ ಹಿಂದಿನ ಸೀಟ್‌ನಲ್ಲಿ ಒಂದೂವರೆ ವರ್ಷದ ಹೆಣ್ಣು ಕರುವೊಂದನ್ನು ಕಟ್ಟಿ ಹಾಕಿರುವುದು ಬೆಳಕಿಗೆ ಬಂದಿದೆ. ಜೊತೆಗೆ ಗೋ ಸಾಗಾಟಕ್ಕೆ ಇಲಾಖೆಯಿಂದ ಯಾವುದೇ ಅನುಮತಿ ಇಲ್ಲದಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದ್ದ ಹಿನ್ನೆಲೆಯಲ್ಲಿ ಆರೋಪಿಗಳಾದ ಮಾರುತಿ ಓಮ್ನಿ ಚಾಲಕ ಶಿವಪ್ರಸಾದ್ ಭಟ್ ಮತ್ತು ಚಂದ್ರನ್ ಟಿ ಅವರನ್ನು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದು, ಕರು ಸಾಗಾಟಕ್ಕೆ ಬಳಸಿದ್ದ ಮಾರುತಿ ಓಮ್ನಿ ( KL 14 L 7819) ನ್ನು ವಶ ಪಡಿಸಿಕೊಳ್ಳಲಾಗಿದೆ.
ಆರೋಪಿಗಳಿಗೆ ಪುತ್ತೂರಿನ ಖಾಸಗಿ ಯೂಟ್ಯೂಬ್ ವರದಿಗಾರ ತಕ್ಷಣವೇ ಜಾಮೀನು ನೀಡಿದ್ದಾರೆ. ವರದಿಗಾರನ ಜಾಮೀನು ಹಿನ್ನಲೆಯಲ್ಲಿ ಇಬ್ಬರು ಆರೋಪಿಗಳನ್ನು ಪೋಲೀಸರು ಬಿಡುಗಡೆಗೊಳಿಸಿದ್ದಾರೆ. ಅಕ್ರಮ ಜಾನುವಾರು ಸಾಗಾಟದಲ್ಲಿ ಸಿಕ್ಕಿಬಿದ್ದ ಆರೋಪಿಗಳಿಗೆ ಮಾಧ್ಯಮ ವ್ಯಕ್ತಿಯೊಬ್ಬ ತಕ್ಷಣವೇ ಜಾಮೀನು ನೀಡಿ ಬಿಡಿಸಿಕೊಂಡಿರುವುದು ಇದೀಗ ಮಾಧ್ಯಮ ವಲಯದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.