LATEST NEWS
ರೋಗ ಲಕ್ಷಣ ಇರುವ ಕೋವಿಡ್ – 19 ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಿ – ಶಾಸಕ ರಘುಪತಿ ಭಟ್
ಉಡುಪಿ, ಮೇ 17: ರೋಗ ಲಕ್ಷಣ ಇರುವ ಕೋವಿಡ್ – 19 ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಿ – ಆಕ್ಸಿಜನ್ ಸ್ಯಾಚುಲೇಶನ್ 94 ಕ್ಕಿಂತ ಕಡಿಮೆ ಬಂದವರನ್ನು ಆಸ್ಪತ್ರೆಗೆ ದಾಖಲಿಸಿ – ಟಾಸ್ಕ್ ಪೋರ್ಸ್ ಸಭೆಯಲ್ಲಿ ಶಾಸಕ ರಘುಪತಿ ಭಟ್ ಸೂಚನೆ.
ಕೋವಿಡ್ – 19 ದೃಢಪಟ್ಟ ಸೋಂಕಿತರ ಸುರಕ್ಷತೆಯ ದೃಷ್ಟಿಯಿಂದ ರೋಗ ಲಕ್ಷಣ ಇರುವ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಬೇಕು. ಹಾಗೂ ಆಕ್ಸಿಜನ್ ಸ್ಯಾಚುಲೇಶನ್ ಲೆವೆಲ್ 94 ಕ್ಕಿಂತ ಕಡಿಮೆ ಬಂದವರನ್ನು ತಕ್ಷಣದಲ್ಲಿ ಆಸ್ಪತ್ರೆಗೆ ದಾಖಲಿಸಬೇಕು. ಉಡುಪಿಯ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಬೆಡ್ ಮತ್ತು ಆಕ್ಸಿಜನ್ ಬೆಡ್ ಗಳ ಕೊರತೆಯಿರುವುದಿಲ್ಲ. ಯಾವುದೇ ಅಪಪ್ರಚಾರಗಳಿಗೆ ಜನತೆ ಕಿವಿಗೊಡದಂತೆ ಜನರಿಗೆ ಮನವರಿಕೆ ಮಾಡಿ ಕೋವಿಡ್ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದು ಕೋವಿಡ್ – 19 ನಿಯಂತ್ರಣ ಸಂಬಂಧ ರಚಿಸಲಾದ ಟಾಸ್ಕ್ ಪೋರ್ಸ್ ಸಭೆಯಲ್ಲಿ ಶಾಸಕ ರಘುಪತಿ ಭಟ್ ಸೂಚಿಸಿದರು.
ಇಂದು ದಿನಾಂಕ 17-05-2021 ರಂದು ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಉಡುಪಿ ನಗರದ 6 ವಾರ್ಡ್ ಗಳಿಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಶಾರದಾ ಕಲ್ಯಾಣ ಮಂಟಪದಲ್ಲಿ ಟಾಸ್ಕ್ ಪೋರ್ಸ್ ಸಭೆ ನಡೆಸಲಾಯಿತು.
ಕೋವಿಡ್ – 19 ಸೋಂಕು ದೃಡಪಟ್ಟವರು ರೋಗ ಲಕ್ಷಣಗಳಿದ್ದು, ಆಸ್ಪತ್ರೆಗೆ ದಾಖಲಾಗಬೇಕಾದಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಇಲ್ಲವಾದರೆ ಕಾಲ್ ಸೆಂಟರ್ ಮುಖಾಂತರ ಖಾಸಗಿ ಆಸ್ಪತ್ರೆಗೆ ದಾಖಲಾಗಬಹುದು. ಕೋವಿಡ್ ಸೋಂಕಿತರ ಚಿಕಿತ್ಸೆ ಆಯುಷ್ಮಾನ್ ಯೋಜನೆಯಡಿ ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಅಲ್ಲದೆ ಐಸೋಲೇಷನ್ ಆಗಲು ಆರಂಭಿಸಲಾದ ಕೋವಿಡ್ ಕೇರ್ ಸೆಂಟರ್ ಸಂಪೂರ್ಣ ಉಚಿತವಾಗಿದ್ದು, ಅವರ ಆರೋಗ್ಯದ ಮೇಲೆ ನಿಗಾ ವಹಿಸಲು 24 ಗಂಟೆಯೂ ವೈದ್ಯಕೀಯ ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದಾರೆ. ಈ ಬಗ್ಗೆ ಜನರಿಗೆ ತಿಳುವಳಿಕೆ ಮೂಡಿಸುವ ಕೆಲಸವಾಗಬೇಕು ಎಂದು ತಿಳಿಸಿದರು.
ಕೋವಿಡ್ – 19 ನಿಯಂತ್ರಣಕ್ಕೆ ಸರ್ಕಾರ ನಗರ ಸಭೆಯ ವಾರ್ಡ್ ಮಟ್ಟದಲ್ಲಿ, ಗ್ರಾಮ ಗ್ರಾಮಗಳಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ಟಾಸ್ಕ್ ಪೋರ್ಸ್ ತಂಡ ರಚಿಸಲು ಜಿಲ್ಲಾಡಳಿತಕ್ಕೆ ಆದೇಶಿಸಿದೆ. ಈ ತಂಡದಲ್ಲಿ ಆಶಾ ಕಾರ್ಯಕರ್ತೆಯರು, ಶುಶ್ರೂಷಕರು, ಪೊಲೀಸ್ ಸಿಬ್ಬಂದಿ, ಗ್ರಾಮ ಕರಣಿಕರು ಇರುತ್ತಾರೆ.
ಕೋವಿಡ್ – 19 ದೃಢಪಟ್ಟು ರೋಗ ಲಕ್ಷಣಗಳಿಲ್ಲದೆ ಮನೆಯಲ್ಲಿ ಐಸೋಲೇಷನ್ ಆದವರ ಮನೆಗೆ ಪ್ರತಿನಿತ್ಯ ಭೇಟಿ ನೀಡಿ ಅವರ ಆಕ್ಸಿಜನ್ ಸ್ಯಾಚುಲೇಶನ್ ಲೆವೆಲ್ ಪರೀಕ್ಷೆ ಮಾಡಿ ಆರೋಗ್ಯದ ಬಗ್ಗೆ ಮಾಹಿತಿ ಕಲೆ ಹಾಕಬೇಕು. ವೈದ್ಯಕೀಯ ತಜ್ಞರ ಪ್ರಕಾರ ಸೋಂಕು ದೃಢಪಟ್ಟವರು ತಮ್ಮ ಆಕ್ಸಿಜನ್ ಸಾಚ್ಯುಲೇಶನ್ ಲೆವೆಲ್ 94 ಕ್ಕಿಂತ ಕಡಿಮೆ ಬಂದ ತಕ್ಷಣದಲ್ಲಿ ಆಸ್ಪತ್ರೆಗೆ ದಾಖಲಾದರೆ ಅವರ ಆರೋಗ್ಯ ಶೀಘ್ರದಲ್ಲಿ ಸುಧಾರಿಸುತ್ತದೆ.
ನಿರ್ಲಕ್ಷ್ಯ ವಹಿಸಿದರೆ ಗಂಭೀರ ಸ್ಥಿತಿಗೆ ತಲುಪುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಸೊಂಕು ದೃಢ ಪಟ್ಟವರ ಆಕ್ಸಿಜನ್ ಸ್ಯಾಚುಲೇಶನ್ ಲೆವೆಲ್ ದಿನಾ ಪರೀಕ್ಷೆ ಮಾಡಬೇಕು. ಇದಕ್ಕಾಗಿ ನಾನು ಫಲ್ಸ್ ಆಕ್ಷೀ ಮೀಟರ್ ಖರೀದಿಗೆ ನನ್ನ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಈಗಾಗಲೇ ರೂ. 10.00 ಲಕ್ಷ ಅನುದಾನವನ್ನು ನೀಡಿದ್ದು, ಅದರಲ್ಲಿ ಫಲ್ಸ್ ಆಕ್ಷೀ ಮೀಟರ್ ಖರೀದಿ ಮಾಡಲಾಗಿದೆ. ಇದನ್ನು ಕೋವಿಡ್ ಸೋಂಕು ದೃಢಪಟ್ಟು ಮನೆಯಲ್ಲಿ ಐಸೋಲೇಶನ್ ಆದವರ ಮನೆಗೆ ಮತ್ತೆ ವಾಪಸ್ ಪಡೆಯುವ ಷರತ್ತು ವಿಧಿಸಿ ನೀಡಿ ಎಂದು ಸೂಚಿಸಿದರು.
ಪೊಲೀಸ್ ಉಪಾಧೀಕ್ಷಕರಾದ ಸುಧಾಕರ್ ಎಸ್. ನಾಯಕ್, ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್, ನಗರಸಭೆ ಆಯುಕ್ತರಾದ ಉದಯ್ ಕುಮಾರ್ ಶೆಟ್ಟಿ, ತಹಸೀಲ್ದಾರ್ ಪ್ರದೀಪ್ ಕುರ್ಡೆಕರ್, ನಗರಸಭೆ ಅಧ್ಯಕ್ಷರಾದ ಶ್ರೀಮತಿ ಸುಮಿತ್ರಾ ಆರ್. ನಾಯಕ್, ಉಡುಪಿ ನಗರ ಠಾಣೆ ನಿರೀಕ್ಷಕರಾದ ಪ್ರಮೋದ್ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ವಾಸುದೇವ ಉಪಾಧ್ಯಾಯ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು, ನಗರಸಭೆ ಸದಸ್ಯರು ಉಪಸ್ಥಿತರಿದ್ದರು.