KARNATAKA
ಹೈಕೋರ್ಟ್ ವಿರುದ್ಧ ಮಾತನಾಡುವವರು ಉಗ್ರರು, ನ್ಯಾಯ ಸಿಗದಿದ್ದರೆ ಪಾಕಿಸ್ತಾನ, ಅಫ್ಘಾನಿಸ್ತಾನಕ್ಕೆ ಹೋಗಿ: ಯಶ್‌ಪಾಲ್ ಸುವರ್ಣ
ಉಡುಪಿ, ಮಾರ್ಚ್ 16: ಹೈಕೋರ್ಟ್ ವಿರುದ್ಧ ಮಾತನಾಡುವವರು ಉಗ್ರರು, ಸುಪ್ರೀಂ ಕೋರ್ಟ್ನಲ್ಲಿ ನ್ಯಾಯ ಸಿಗದಿದ್ದರೆ ಪಾಕಿಸ್ತಾನ, ಅಫ್ಘಾನಿಸ್ತಾನಕ್ಕೆ ಹೋಗಿ ಎಂದು ಸರ್ಕಾರಿ ಪಿಯು ಕಾಲೇಜು ಉಪಾಧ್ಯಕ್ಷ ಯಶ್‌ಪಾಲ್ ಸುವರ್ಣ ಹೇಳಿಕೆ ನೀಡಿದ್ದಾರೆ.
ಹೈಕೋರ್ಟ್ ವಿಸ್ತೃತ ಪೀಠದಿಂದ ತೀರ್ಪು ಬಂದರೂ ಕೋರ್ಟ್ ವಿರುದ್ಧ ಮಾತನಾಡುವ ಹಿಜಬ್ ಹೋರಾಟಗಾರ್ತಿಯರು ವಿದ್ಯಾರ್ಥಿನಿಯರೇ ಅಲ್ಲ. ಅವರು ಟೆರರಿಸ್ಟ್ ಸಂಘಟನೆಯ ಸದಸ್ಯರು. ಸುಪ್ರೀಂ ಕೋರ್ಟ್ನಲ್ಲೂ ನಿಮ್ಮ ವಿರುದ್ಧ ತೀರ್ಪು ಬಂದರೆ ಪಾಕಿಸ್ತಾನಕ್ಕೆ, ಅಫ್ಘಾನಿಸ್ತಾನಕ್ಕೆ ಹೋಗಿ ಜೀವನ ಮಾಡಿ ಎಂದು ಕಿಡಿಕಾರಿದ್ದಾರೆ.
ಅಂಬೇಡ್ಕರ್ ಬಗ್ಗೆ ಮಾತನಾಡುವ ಅರ್ಹತೆ ವಿದ್ಯಾರ್ಥಿನಿಯರಿಗೆ ಇಲ್ಲ. ನೆಲದ ಕಾನೂನು ಗೌರವಿಸದವರು, ಅವರಿಗೆ ಬೆಂಬಲ ನೀಡುತ್ತಿರುವ ಸಂಘಟನೆಗಳು ದೇಶವಿರೋಧಿ ಸಂಘಟನೆ ಎಂದು ಹೇಳಿದ್ದಾರೆ. ವಿದ್ಯಾರ್ಥಿಗಳು ದೇಶ ವಿರೋಧಿಗಳು ಎಂಬುದು ಮತ್ತೆ ಸಾಬೀತಾಗಿದೆ.
ದೇಶ ವಿರೋಧಿ ಸಂಘಟನೆಗಳ ಕುಮ್ಮಕ್ಕಿನಿಂದ ಹೇಳಿಕೆಯನ್ನು ನೀಡುತ್ತಿದ್ದಾರೆ. ಅವರಿಗೆ ಭಾರತ ದೇಶದ ಮೇಲೆ ಅಭಿಮಾನ ಇಲ್ಲ. ನ್ಯಾಯಾಧೀಶರ ಬಗ್ಗೆ ಹಗುರವಾಗಿ ಮಾತನಾಡುವವರು ಈ ದೇಶದಲ್ಲಿ ಇರಬೇಕಾ? ಮುಸಲ್ಮಾನ ವಿದ್ಯಾರ್ಥಿನಿಯರನ್ನು ಶಿಕ್ಷಣವಂಚಿತರನ್ನಾಗಿ ಮಾಡಲಾಗುತ್ತಿದೆ. ಇದರ ಹಿಂದೆ ಒಂದು ದೊಡ್ಡ ಷಡ್ಯಂತ್ರ ಇದೆ. ಮುಸಲ್ಮಾನ ಮಹಿಳೆಯರನ್ನು ಗುಲಾಮರ ರೀತಿಯಲ್ಲಿ ನಡೆಸಿಕೊಳ್ಳಲಾಗುತ್ತಿದೆ. ದೇಶವಿರೋಧಿ ಸಂಘಟನೆಗಳ ಕುಮ್ಮಕ್ಕಿದೆ ಒಳಗಾಗಬೇಡಿ ಎಂದು ತಿಳಿಸಿದ್ದಾರೆ.
ಆರು ವಿದ್ಯಾರ್ಥಿನಿಯರಿಂದ ಗಂಡಾಂತರ ಇದೆ. ನಮ್ಮ ಕಾಲೇಜಿನ 6 ವಿದ್ಯಾರ್ಥಿನಿಯರಿಂದ ಸಮಾಜಕ್ಕೆ ದೊಡ್ಡ ಗಂಡಾಂತರ ಇದೆ. ಹಿಜಬ್ ತೆಗೆದು ಬಂದರೂ ಅವರನ್ನು ಕ್ಲಾಸಿಗೆ ಸೇರಿಸುವ ಪರಿಸ್ಥಿತಿಯಿಲ್ಲ. ನಾವು ಈ ಬಗ್ಗೆ ಬಹಳ ಚಿಂತನೆ ನಡೆಸಬೇಕಾಗಿದೆ. ಅವರನ್ನು ಕ್ಲಾಸಿಗೆ ಬಿಡಬೇಕಾ ಬೇಡವೇ ಎಂಬ ಬಗ್ಗೆ ಚರ್ಚೆ ಮಾಡುತ್ತೇವೆ.
ಸಮಾನ ನಾಗರಿಕ ಸಂಹಿತೆ, ಹಿಂದೂ ರಾಷ್ಟ್ರ ನಿರ್ಮಾಣ ಮಾಡುವ ಕಲ್ಪನೆ ಇದೆ. ಮುಸಲ್ಮಾನರನ್ನು ನಾವು ಚುನಾವಣೆಯ ಲಾಭಕ್ಕೆ ಬಳಸುತ್ತಿಲ್ಲ. ಅಭಿವೃದ್ಧಿಯ ಚಿಂತನೆ, ರಾಷ್ಟ್ರೀಯ ಚಿಂತನೆ ಇದ್ದ ಮುಸ್ಲಿಮರನ್ನು ಒಪ್ಪುತ್ತೇವೆ ಎಂದು ಹೇಳಿದ್ದಾರೆ.