KARNATAKA
40ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದರೆ ಸಿಗುವುದಿಲ್ಲ ಖಾಯಂ ಉಪನ್ಯಾಸಕರು!
ಬೆಂಗಳೂರು, ಆಗಸ್ಟ್ 12: 40ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಪಿಯು ಕಾಲೇಜುಗಳ ಉಪನ್ಯಾಸಕರ ಹುದ್ದೆಗಳನ್ನೂ ವರ್ಗಾವಣೆ ಕೌನ್ಸೆಲಿಂಗ್‌ಗೆ ಪರಿಗಣಿಸಬೇಕು. ಅಲ್ಲಿಯವರೆಗೆ ಕೌನ್ಸೆಲಿಂಗ್ ಪ್ರಕ್ರಿಯೆ ಸ್ಥಗಿತಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಒತ್ತಾಯಿಸಿದೆ.
2023ನೇ ಸಾಲಿನ ಸರ್ಕಾರಿ ಪಿಯು ಕಾಲೇಜುಗಳ ಉಪನ್ಯಾಸಕರ ವರ್ಗಾವಣೆಯಲ್ಲಿ ವಿಷಯವಾರು 40 ವಿದ್ಯಾರ್ಥಿಗಳ ಸಂಖ್ಯೆಯನ್ನು ನಿಗದಿಗೊಳಿಸಲಾಗಿದೆ. ಅದಕ್ಕಿಂತ ಕಡಿಮೆ ಇದ್ದರೆ ಆ ವಿಷಯದ ಉಪನ್ಯಾಸಕರಿಗೆ ಆ ಕಾಲೇಜಿಗೆ ವರ್ಗಾವಣೆ ಸಿಗುವುದಿಲ್ಲ. ಇದರಿಂದ ರಾಜ್ಯದಲ್ಲಿನ 1,232 ಸರ್ಕಾರಿ ಪಿಯು ಕಾಲೇಜುಗಳಲ್ಲಿ ಶೇ 30ಕ್ಕಿಂತ ಹೆಚ್ಚು ಬಾಗಿಲು ಮುಚ್ಚಬೇಕಾಗುತ್ತದೆ ಎಂದು ಸಂಘದ ಅಧ್ಯಕ್ಷ ಎ.ಎಚ್.ನಿಂಗೇಗೌಡ, ಪ್ರಧಾನ ಕಾರ್ಯದರ್ಶಿ ಶಿವರಾಜ್ ಮಾಲಿಪಾಟೀಲ ಮತ್ತಿತರ ಪದಾಧಿಕಾರಿಗಳು, ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಅವರು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಶುಕ್ರವಾರ ಭೇಟಿಯಾಗಿ ಮನವಿ ಮಾಡಿದರು.
ಮಕ್ಕಳು ಕಡಿಮೆ ಇರುವ ವಿಷಯಗಳ ಹುದ್ದೆಗಳನ್ನು ಕೌನ್ಸೆಲಿಂಗ್‌ನಲ್ಲಿ ತೋರಿಸದಂತೆ ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರು ಎಲ್ಲ ಜಿಲ್ಲೆಗಳ ಉಪ ನಿರ್ದೇಶಕರಿಗೆ ನಿರ್ದೇಶನ ನೀಡಿದ್ದಾರೆ. ಮನವಿ ಮಾಡಿದ ನಂತರ ಒಂದು ದಿನ ಕೌನ್ಸೆಲಿಂಗ್ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. ಹೀಗೆ ನಿಯಮ ರೂಪಿಸಿದರೆ ಗ್ರಾಮಾಂತರ ಪ್ರದೇಶದ ಕಾಲೇಜುಗಳು ಉಳಿಯುವುದಿಲ್ಲ. ವಿದ್ಯಾರ್ಥಿಗಳ ಸಂಖ್ಯೆಗೆ ಮಹತ್ವ ನೀಡದೇ ಸ್ಥಳ ನಿಯೋಜನೆ ಮಾಡಬೇಕು.
2021ರ ತಿದ್ದುಪಡಿ ನಿಯಮದಂತೆ ಎರಡು ವರ್ಷಗಳಿಗೊಮ್ಮೆ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ಕೋರಿದರು. ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ್, ಮಾಜಿ ಸದಸ್ಯರಾದ ಕೆ.ಟಿ. ಶ್ರೀಕಂಠೇಗೌಡ, ಪುಟ್ಟಣ್ಣ ಅವರು ಪದವಿಪೂರ್ವ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದಾರೆ.