LATEST NEWS
ಇಡುಕ್ಕಿ: ತನ್ನ ಮೇಲೆ ದಾಳಿ ಮಾಡಿದ ಚಿರತೆಯನ್ನೇ ಕೊಂದು ಹಾಕಿದ ವ್ಯಕ್ತಿ
ಕೇರಳ, ಸೆಪ್ಟೆಂಬರ್ 04: ಇಡುಕ್ಕಿ ಜಿಲ್ಲೆಯಲ್ಲಿ ಬುಡಕಟ್ಟು ವ್ಯಕ್ತಿಯೊಬ್ಬ ತನ್ನ ಆತ್ಮರಕ್ಷಣೆಗಾಗಿ ಚಿರತೆಯನ್ನು ಕೊಂದುಹಾಕಿರುವ ಘಟನೆ ಶನಿವಾರ ವರದಿಯಾಗಿದೆ. ಇಡುಕ್ಕಿ ಜಿಲ್ಲೆಯ ಮಂಕುಲಂನ ಬುಡಕಟ್ಟು ಪ್ರದೇಶದಲ್ಲಿ ವಾಸಿಸುತ್ತಿರುವ ಗೋಪಾಲನ್(47) ಎಂಬಾತ ತನ್ನ ಮೇಲೆ ದಾಳಿ ಮಾಡಿದ ದೊಡ್ಡ ಚಿರತೆಯನ್ನು ತನ್ನಲ್ಲಿದ್ದ ಆಯುಧದಿಂದ ಕೊಂದಿದ್ದಾನೆ.
ಮಂಕುಳಂ ಭಾಗದಲ್ಲಿ ಹಲವಾರು ಸಮಯದಿಂದ ಪ್ರತಿನಿತ್ಯ ಚಿರತೆ ದಾಳಿ ಮಾಡುತ್ತಿತ್ತು. ಮನೆಗಳಿಗೆ ದಾಳಿಯಿಡುತ್ತಿದ್ದ ಚಿರತೆ ಜಾನುವಾರುಗಳು, ಕೋಳಿ ಮತ್ತು ಮೇಕೆಗಳನ್ನು ಹೊತ್ತೊಯ್ಯುತ್ತಿತ್ತು. ಚಿರತೆ ಸೆರೆಗೆ ಬಲೆಗಳನ್ನು ಹಾಕಲಾಗಿತ್ತಾದರೂ ನುಣುಚಿಕೊಂಡು ಪರಾರಿಯಾಗಲು ಯಶಸ್ವಿಯಾಗುತ್ತಿತ್ತು. ಶನಿವಾರ ಬೆಳಿಗ್ಗೆ ಗೋಪಾಲನ್ ತನ್ನ ಸಹೋದರನ ಮನೆಗೆ ಹೋಗುವ ಮಾರ್ಗದಲ್ಲಿ ಏಕಾಏಕಿ ಚಿರತೆ ಎದುರಾಗಿದೆ.
“ನಾನು ಪ್ರಯಾಣಿಸುತ್ತಿದ್ದ ರಸ್ತೆಯಲ್ಲಿ ಚಿರತೆ ನಿಂತಿತ್ತು. ಅದು ಇದ್ದಕ್ಕಿದ್ದಂತೆ ನನ್ನ ಮೇಲೆ ನುಗ್ಗಿತು ಮತ್ತು ನಾನು ನನ್ನನ್ನು ರಕ್ಷಿಸಿಕೊಳ್ಳಲು ನನ್ನ ಕೈಯಲ್ಲಿದ್ದ ಮಚ್ಚನ್ನು ಬೀಸಿದೆʼ ಎಂದು ಗೋಪಾಲನ್ ಹೇಳಿದ್ದಾರೆ. ಮಚ್ಚಿನೇಟಿನಿಂದ ಚಿರತೆ ತಲೆಗೆ ಗಾಯವಾಗಿ ರಕ್ತಸ್ತ್ರಾವದಿಂದ ಸಾವನ್ನಪ್ಪಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಈತ ತನ್ನನ್ನು ಉಳಿಸಿಕೊಳ್ಳಲು ಕ್ರಮಕೈಗೊಂಡಿದ್ದರಿಂದ ಆತನ ವಿರುದ್ಧ ಪ್ರಕರಣ ದಾಖಲಾಗುವುದಿಲ್ಲ ಎಂದು ಕೇರಳ ಸರ್ಕಾರ ಖಚಿತಪಡಿಸಿದೆ.
“ಆತ ಇನ್ನೂ ಬದುಕಿರುವುದೇ ಪವಾಡ. ನಾವು ಬಲೆಗಳನ್ನು ಹಾಕಿದ್ದೆವು ಆದರೆ ಚಿರತೆ ನುಣುಚಿಕೊಂಡಿದೆ. ತನ್ನನ್ನು ರಕ್ಷಿಸಿಕೊಳ್ಳಲು ಚಿರತೆಯನ್ನು ಕೊಂದ ಆತನ ವಿರುದ್ಧ ಪ್ರಕರಣ ದಾಖಲಿಸದಂತೆ ಅರಣ್ಯ ಇಲಾಖೆಗೆ ಸೂಚನೆ ನೀಡಲಾಗಿದೆ” ಎಂದು ರಾಜ್ಯ ಅರಣ್ಯ ಸಚಿವ ಎ.ಕೆ.ಸಶೀಂದ್ರನ್ ಹೇಳಿದ್ದಾರೆ.