LATEST NEWS
ನಾನು ಮಲಾಲಾ ಯೂಸುಫ್‌ಜಾಯ್ ಅಲ್ಲ, ದೇಶ ಬಿಟ್ಟು ಓಡಿಹೋಗಬೇಕಾದ ಪರಿಸ್ಥಿತಿ ಭಾರತದಲ್ಲಿಲ್ಲ – ಕಾಶ್ಮೀರ ಪತ್ರಕರ್ತೆಯ ದಿಟ್ಟ ನುಡಿ
ಲಂಡನ್ ಫೆಬ್ರವರಿ 24: ತಾನು ಮಲಾಲಾ ಯೂಸುಫ್‌ಜಾಯ್ ಅಲ್ಲ, ದೇಶ ಬಿಟ್ಟು ಓಡಿಹೋಗಬೇಕಾದ ಪರಿಸ್ಥಿತಿ ಭಾರತದಲ್ಲಿಲ್ಲ ಎಂದು ಕಾಶ್ಮೀರಿ ಪತ್ರಕರ್ತೆ ಯಾನಾ ಮಿರ್ ಅವರು ಬ್ರಿಟನ್ ಸಂಸತ್ತಿನಲ್ಲಿ ಪಾಕಿಸ್ತಾನದ ಅಪಪ್ರಚಾರದ ವಿರುದ್ಧ ಸಿಡಿದೆದ್ದಿದ್ದು, ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಲಂಡನ್‌ನಲ್ಲಿ ಬ್ರಿಟನ್ ಪಾರ್ಲಿಮೆಂಟ್ ಆಯೋಜಿಸಿದ್ದ ‘ರೆಸಲ್ಯೂಶನ್ ಡೇ’ ಯಲ್ಲಿ ಮಾತನಾಡಿದ ಯಾನಾ ಮಿರ್, ಜಮ್ಮು ಮತ್ತು ಕಾಶ್ಮೀರದ ಜನರನ್ನು ‘ವಿಭಜನೆ ಮಾಡುವುದನ್ನು ನಿಲ್ಲಿಸಿ’ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳನ್ನು ಒತ್ತಾಯಿಸಿದರು. ಭಯೋತ್ಪಾದನೆಯ ಗಂಭೀರ ಬೆದರಿಕೆಗಳಿಂದಾಗಿ ತನ್ನ ದೇಶ ಬಿಟ್ಟು ಮಲಾಲಾ ಯೂಸುಫ್‌ಜಾಯ್ ಓಡಿ ಹೋಗಬೇಕಾಯಿತು. ಆದರೆ ನಾನು ಮಲಾಲಾ ಯೂಸುಫ್ ಜೈ ಅಲ್ಲ. ಏಕೆಂದರೆ ನನ್ನ ದೇಶ ಭಾರತ ಯಾವಾಗಲೂ ಪ್ರಬಲವಾಗಿದೆ ಮತ್ತು ಭಯೋತ್ಪಾದಕ ಶಕ್ತಿಗಳ ವಿರುದ್ಧ ಒಗ್ಗೂಡಿರುತ್ತದೆ ಎಂದು ಹೇಳಿದರು.
ಕಾಶ್ಮೀರಿ ಕಾರ್ಯಕರ್ತೆ ಮತ್ತು ಪತ್ರಕರ್ತೆ ಯಾನಾ ಮಿರ್ ಅವರು ‘ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಕುರಿತ ಅಪಪ್ರಚಾರ ಮಾಡುತ್ತಿರುವ ಪಾಕಿಸ್ತಾನದ ನಡೆಯನ್ನು ಬಲವಾಗಿ ಖಂಡಿಸಿ. ‘ಭಾರತದ ಭಾಗವಾಗಿರುವ ಕಾಶ್ಮೀರದಲ್ಲಿ’ ತಾನು ಸಂಪೂರ್ಣವಾಗಿ ಸುರಕ್ಷಿತ ಮತ್ತು ಸ್ವತಂತ್ರವಾಗಿದ್ದೇನೆ ಎಂದು ಹೇಳಿದರು.