KARNATAKA
ಗಂಡನ ಶವದ ಪಕ್ಕ ಮಲಗಿ ಹೈಡ್ರಾಮ , ಬಚ್ಚಿಟ್ಟುಕೊಂಡ ಮಾಂಗಲ್ಯದ ಹಿಂದಿತ್ತು ದಿಲ್ಲಿ ರಾಣಿಯ ಸ್ಫೋಟಕ ರಹಸ್ಯ…!

ಬೆಂಗಳೂರು, ಮೇ 01: ನಗರದ ಯಶವಂತಪುರದಲ್ಲಿ ಖಾಸಗಿ ಕಂಪನಿಯ ಎಕೌಂಟೆಂಟ್ ಶಂಕರ್ ಕೊಲೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಒಳ ಉಡುಪಿನಲ್ಲಿ ಪತ್ನಿ ಬಚ್ಚಿಟ್ಟುಕೊಂಡಿದ್ದ ಮಾಂಗಲ್ಯ ಸರದ ಮೇಲೆ ಮೂಡಿದ ಅನುಮಾನದ ಜಾಡು ಹಿಡಿದ ಹೋದ ಪೊಲೀಸರು ಕೊಲೆ ರಹಸ್ಯವನ್ನ ಬಯಲು ಮಾಡಿದ್ದಾರೆ.
ಆಂಧ್ರಪ್ರದೇಶ ಚಿತ್ತೂರಿನ ಶಂಕರ್ ರೆಡ್ಡಿ (35) ಕೊಲೆಯಾದವ. ಈತ ಯಶವಂತಪುರ ಎಂಕೆ ನಗರದಲ್ಲಿ ವಾಸವಿದ್ದು, ದಿಲ್ಲಿ ರಾಣಿ ಎಂಬಾಕೆ ಜತೆ ಮದುವೆಯಾಗಿತ್ತು. ಕ್ಷುಲ್ಲಕ ಕಾರಣಕ್ಕೆ ಇತ್ತೀಚಿಗೆ ಗಂಡನನ್ನು ತೊರೆದು ಚಿತ್ತೂರಿನಲ್ಲಿರುವ ತವರುಮನೆಗೆ ದಿಲ್ಲಿ ರಾಣಿ ತೆರಳಿದ್ದಳು. ಈ ವೇಳೆ ನೆರೆಮನೆಯ ನಿವಾಸಿ ಜತೆ ಲವ್ವಿಡವ್ವಿ ಶುರುವಿಟ್ಟುಕೊಂಡಿದ್ದಳು. ಇದ್ಯಾವುದರ ಪರಿವೇ ಇಲ್ಲದ ಗಂಡ, ಪತ್ನಿಗೆ ಕರೆ ಮಾಡಿ ಮನೆಗೆ ವಾಪಾಸ್ಸಾಗುವಂತೆ ಮನವಿ ಮಾಡಿದ್ದ.

ದಿಲ್ಲಿ ರಾಣಿ ಈ ವಿಚಾರವನ್ನು ಪ್ರಿಯಕರನ ಬಳಿ ಹೇಳಿಕೊಂಡಿದ್ದಳು. ಇದರಿಂದ ಕುಪಿತಗೊಂಡ ಆಕೆಯ ಪ್ರಿಯಕರ, ಶಂಕರ್ನನ್ನು ಕೊಲೆ ಮಾಡಿ ಕಥೆ ಕಟ್ಟುವಂತೆ ಹೇಳಿದ್ದ. ಅದರಂತೆ 3 ದಿನಗಳ ಹಿಂದೆ ಯಶವಂತಪುರದಲ್ಲಿದ್ದ ಪತಿ ಶಂಕರ್ ಮನೆಗೆ ದಿಲ್ಲಿ ರಾಣಿ ಬಂದಿದ್ದಳು. ಏ.28ರಂದು ರಾತ್ರಿ 12.30ರಲ್ಲಿ ಪತಿ ಗಾಢ ನಿದ್ದೆಯಲ್ಲಿದ್ದಾಗ ಚೂರಿಯಿಂದ ಇರಿದು ಕೊಲೆ ಮಾಡಿದ್ದಳು.
ನಂತರ ಅದೇ ಚೂರಿಯಿಂದ ತನ್ನ ಕೈಗೆ ಸ್ವಲ್ಪ ಗಾಯ ಮಾಡಿಕೊಂಡು ಪತಿಯ ಶವದ ಪಕ್ಕದಲ್ಲಿ ಮಲಗಿ ಪ್ರಜ್ಞೆತಪ್ಪಿರುವಂತೆ ನಟಿಸಿದ್ದಳು. ಈ ನಡುವೆ ಎಚ್ಚರಗೊಂಡ 7 ವರ್ಷದ ಶಂಕರ್ ಪುತ್ರ ಮನೆ ಮಾಲೀಕರಿಗೆ ಮಾಹಿತಿ ನೀಡಿದ್ದ. ಮನೆ ಮಾಲೀಕರು ಸ್ಥಳಕ್ಕೆ ಧಾವಿಸಿದಾಗ ಶಂಕರ್ ಕೊಲೆಯಾಗಿರುವುದು ಗೊತ್ತಾಗಿತ್ತು.
ಗಾಯಗೊಂಡಂತೆ ನಟಿಸಿದ್ದ ದಿಲ್ಲಿ ರಾಣಿಯನ್ನು ಪೊಲೀಸರು ಈ ಕುರಿತು ಪ್ರಶ್ನಿಸಿದಾಗ, ‘ಯಾರೋ ಅಪರಿಚಿತರು ಬಂದು ನನಗೆ ಹಲ್ಲೆ ಮಾಡಿ ಪತಿಯನ್ನು ಕೊಲೆ ಮಾಡಿದ್ದರು. ನನ್ನ ಮಾಂಗಲ್ಯ ಸರವನ್ನು ಕದ್ದೊಯ್ದಿದ್ದಾರೆ’ ಎಂದು ಕಥೆ ಕಟ್ಟಿದ್ದಳು. ಇತ್ತ ಪೊಲೀಸರು ದಿಲ್ಲಿ ರಾಣಿಯನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಒಳ ಉಡುಪಿನಲ್ಲಿ ಮಾಂಗಲ್ಯ ಸರ ಬಚ್ಚಿಟ್ಟಿರುವುದು ಕಂಡು ಬಂದಿತ್ತು. ಅನುಮಾನಗೊಂಡು ತೀವ್ರ ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾಳೆ.