LATEST NEWS
ಹೈದರಾಬಾದ್ – ತಾಯಿಯ ಶವದ ಜೊತೆ ಹತ್ತು ದಿನ ಕಳೆದ ಹೆಣ್ಣು ಮಕ್ಕಳು..ಏನಿದು ಘಟನೆ
ಹೈದರಾಬಾದ್ ಫೆಬ್ರವರಿ 02 : ತಾಯಿ ತೀರಿಹೋಗಿದ್ದರೂ ಆಕೆಯ ಶವದ ಜೊತೆ ಇಬ್ಬರು ಹೆಣ್ಣುಮಕ್ಕಳು ಬರೋಬ್ಬರಿ 10 ದಿನ ಕಳೆದ ಘಟನೆ ಹೈದ್ರಾಬಾದ್ನಲ್ಲಿ ನಡೆದಿದೆ. ಜನವರಿ 23 ರಂದೇ ತಾಯಿಯು ಜೀವವನ್ನು ಬಿಟ್ಟಿದ್ದಾರೆ. ತಾಯಿ ಕಳೆದುಕೊಂಡ ಖಿನ್ನತೆಯಲ್ಲಿ ಇಬ್ಬರು ಸಹೋದರಿಯರು ಯಾರಿಗೂ ತಿಳಿಸದೇ ಅಮ್ಮನ ಕಳೆಬರಹದೊಂದಿಗೆ ಸುಮಾರು 10 ದಿನಗಳ ಕಾಲ ಕಳೆದಿದ್ದಾರೆ.
ಸಿ ರವಳಿ (25) ಮತ್ತು ಸಿ ಯಶ್ವಿತಾ (22) ಎಂದು ಗುರುತಿಸಲಾದ ಸಹೋದರಿಯರು, ತಮ್ಮ ತಾಯಿ ಸಿ ಲಲಿತಾ (45) ಅವರೊಂದಿಗೆ ಹೈದರಾಬಾದ್ ನಗರದ ವಾರಸಿಗುಡಾ ಪ್ರದೇಶದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.
ಪೊಲೀಸರ ಪ್ರಕಾರ, ಲಲಿತಾ ಐದು ವರ್ಷಗಳ ಹಿಂದೆ ಪತಿ ಸಿಎಲ್ ರಾಜು ಅವರಿಂದ ಬೇರ್ಪಟ್ಟಿದ್ದರು. ತನ್ನ ಇಬ್ಬರು ಪುತ್ರಿಯರೊಂದಿಗೆ ಉಸ್ಮಾನಿಯಾ ವಿಶ್ವವಿದ್ಯಾಲಯದ ಬಳಿಯ ಮಾಣಿಕೇಶ್ವರಿ ನಗರದಲ್ಲಿ ನೆಲೆಸಿರುವ ಅವರು ಮೂರು ತಿಂಗಳ ಹಿಂದೆ ವಾರಸಿಗುಡಾದ ಬೌಧ ನಗರದಲ್ಲಿ ಬಾಡಿಗೆ ಮನೆಗೆ ತೆರಳಿದ್ದರು. ಲಲಿತಾ ಮನೆಯಲ್ಲಿದ್ದರೆ, ರವಳಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಯಶ್ವಿತಾ ಈವೆಂಟ್ ಮ್ಯಾನೇಜಿಂಗ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದರು, ಆದರೆ ಅವರು ಎರಡು ತಿಂಗಳ ಹಿಂದೆ ಕೆಲಸ ಮಾಡುವುದನ್ನು ನಿಲ್ಲಿಸಿ ಮನೆಗೆ ಸೀಮಿತರಾಗಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರು ಮನೆಯ ಬಾಗಿಲನ್ನು ತೆರೆಸಿ ನೋಡಿದಾಗ ಈ ಘಟನೆ ಜನವರಿ 31 ರಂದು ಬೆಳಕಿಗೆ ಬಂದಿದೆ. ಇಬ್ಬರು ಹೆಣ್ಣು ಮಕ್ಕಳ 45 ವಯಸ್ಸಿನ ತಾಯಿ ರಾತ್ರಿ ಮಲಗಿದವರು ಏದ್ದೇ ಇಲ್ಲ. ಮಕ್ಕಳು ಎಬ್ಬಿಸಲು ಹೋದಾಗ ಅವರು ಮೃತಪಟ್ಟಿರುವುದು ದೃಢವಾಗಿದೆ. ಉಸಿರಾಟ ನಿಂತಿದ್ದು. ಹೃದಯ ಬಡಿತ ನಿಂತಿದ್ದು ಕಂಡು ಮಕ್ಕಳು ತಾಯಿ ಮೃತಪಟ್ಟಿದ್ದಾಳೆ ಎಂದು ನಿಶ್ಚಯ ಮಾಡಿದ್ದಾರೆ. ಆದ್ರೆ ಇದನ್ನು ಯಾರಿಗೂ ಹೇಳಿಲ್ಲ. ಸುಮಾರು 10 ದಿನಗಳ ಕಾಲ ಮನೆಯ ಬಾಗಿಲು ಹಾಕಿಕೊಂಡು ಅಮ್ಮನ ಕಳೆಬರಹದೊಂದಿಗೆನೇ ಇದ್ದಾರೆ.
ತಾಯಿ ಮೃತಪಟ್ಟಿದ್ದರಿಂದ ಸಂಪೂರ್ಣವಾಗಿ ಖಿನ್ನತೆಗೆ ಒಳಗಾದ ಹೆಣ್ಣು ಮಕ್ಕಳು ಮುಂದೆ ಏನು ಮಾಡಬೇಕು ಎಂದು ಗೊತ್ತಾಗದೆ ಆಕೆಯ ಮೃತದೇಹದೊಂದಿಗೆ ಮನೆಯಲ್ಲಿಯೇ ಉಳಿದಿದ್ದಾರೆ. ಕೊನೆಗೆ ನೆರೆಹೊರೆಯವರಿಗೆ ಸುಮಾರು ದಿನಗಳ ಕಾಲ ಮನೆಯ ಬಾಗಿಲು ಹಾಕಿದ್ದನ್ನು ನೋಡಿ ಅನುಮಾನಗೊಂಡು ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಮನೆಗೆ ಬಂದು ಬಾಗಿಲು ತೆರೆಸಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.