KARNATAKA
ಪಲ್ಯ, ಸಾಂಬಾರ್ ಸರಿ ಮಾಡಲ್ಲ ಎಂದು ಪ್ರೀತಿಸಿ ಮದುವೆಯಾದ ಹೆಂಡ್ತಿಯನ್ನೇ ಕೊಂದ ಪತಿ

ಬಾಗಲಕೋಟೆ, ಮೇ 03: ಕ್ಷುಲ್ಲಕ ಕಾರಣಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಪತಿ, ಪತ್ನಿಯನ್ನು ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮುಗಳಖೋಡ ಗ್ರಾಮದಲ್ಲಿ ನಡೆದಿದೆ.
ಸಾಕ್ಷಿತಾ ವಾಳಕೆ (19) ಮೃತ ದುರ್ದೈವಿ. ಬೀರಪ್ಪ ಪೂಜಾರಿ (21) ಕೊಲೆ ಮಾಡಿದ ಆರೋಪಿ. ಸಾಕ್ಷಿತಾ ವಾಳಕೆ ಮೂಲತಃ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ವಡಗೋಲ ಗ್ರಾಮದವರು. ಬೀರಪ್ಪ ಪೂಜಾರಿ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮುಗಳಖೋಡ ಗ್ರಾಮದವರು. ಇವರಿಬ್ಬರ ನಡುವೆ ಅಪ್ರಾಪ್ತ ವಯಸ್ಸಿನಲ್ಲೇ ಪ್ರೀತಿ ಶುರುವಾಗಿತ್ತು. ಮಾವನ ಊರು ವಡಗೋಲದಲ್ಲಿ ಹೈಸ್ಕೂಲ್ ಓದುವಾಗಲೇ ಬೀರಪ್ಪ ಹಾಗೂ ಸಾಕ್ಷಿತಾ ಮಧ್ಯೆ ಪ್ರೀತಿ ಶುರುವಾಗಿತ್ತು.

ಇಬ್ಬರ ಪ್ರೀತಿ ತಿಳಿದು ಹೇಗಿದ್ದರೂ ಒಂದೇ ಸಮುದಾಯ ಅಂತ ಪೋಷಕರು ಇವರ ಪ್ರೀತಿಗೆ ಒಪ್ಪಿ ಎರಡೂ ಕುಟುಂಬದ ಹಿರಿಯರು ಕಳೆದ ವರ್ಷ ಮದುವೆ ಮಾಡಿದ್ದರು. ಮದುವೆ ಬಳಿಕ ದಂಪತಿ ಮುಗಳಖೋಡ ಗ್ರಾಮದಲ್ಲಿ ವಾಸಿಸುತ್ತಿದ್ದರು. ಪ್ರೀತಿಸಿದ ಜೀವಗಳು ಒಂದಾಗಿ ಇರುತ್ತವೆ ಅಂತ ಹಿರಿಯರು ಮದುವೆ ಮಾಡಿದ್ರೆ, ಪಲ್ಯ ಸಾಂಬಾರ್ ಸರಿಯಾಗಿ ಮಾಡಲ್ಲ ಎನ್ನುವ ನೇಮಪದಲ್ಲಿ, ಪತಿ ಬೀರಪ್ಪ ತನ್ನ ಪತ್ನಿ ಸಾಕ್ಷಿತಾರನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.
ಏಪ್ರಿಲ್ 29 ರಂದು ರಾತ್ರಿ 2 ಗಂಟೆಗೆ ಇಬ್ಬರ ಮಧ್ಯೆ ಜಗಳ ಶುರುವಾಗಿದೆ. ಗಲಾಟೆ ತಾರಕಕ್ಕೆ ಏರಿ ಪತಿ ತನ್ನ ಪತ್ನಿಯ ಎದೆ ಮೇಲೆ ಕೂತು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಮೃತಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಕೊಲೆ ಮಾಡಿದ ಬೀರಪ್ಪನಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಇನ್ನು ಸ್ಥಳಕ್ಕೆ ಮುಧೋಳ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ಬೀರಪ್ಪನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ಪೊಲೀಸರಗೆ ಬೀರಪ್ಪನಿಗೆ ಅಕ್ರಮ ಸಂಬಂಧ ಇತ್ತು ಎನ್ನುವ ಮಾಹಿತಿ ಸಿಕ್ಕಿದೆ. ಅದಕ್ಕಾಗೇ ಪಲ್ಯ, ಸಾಂಬಾರ್ ಸರಿ ಮಾಡುವುದಿಲ್ಲ ಎಂಬ ನೆಪದಲ್ಲಿ, ಪ್ರೀತಿಸಿ ಮದುವೆಯಾದ ಪತ್ನಿಯನ್ನೇ ಕೊಲೆ ಮಾಡಿದ್ನಾ ಎಂಬ ಅನುಮಾನ ವ್ಯಕ್ತವಾಗಿದೆ.
ಈ ಬಗ್ಗೆ ಬಾಗಲಕೋಟೆ ಎಸ್ಪಿ ಅಮರನಾಥ ರೆಡ್ಡಿ ಮಾಹಿತಿ ನೀಡಿದ್ದು, ಪತಿ-ಪತ್ನಿ ಒಂದೇ ಸಮುದಾಯದವರು. ಅಪ್ರಾಪ್ತ ವಯಸ್ಸಲ್ಲೇ ಲವ್ ಮಾಡಿದ್ದರು. ಒಂದೇ ಸಮುದಾಯ ಆದ ಕಾರಣ ಎಲ್ಲ ಹಿರಿಯರು ಸೇರಿ ಮದುವೆ ಮಾಡಿದ್ದರು. ಕೇವಲ ಅಡುಗೆ ಮಾಡಲು ಬಾರದ ಹಿನ್ನೆಲೆ ಕೊಲೆ ಮಾಡಿಲ್ಲ ಎಂಬ ಸಂಶಯವಿದೆ. ಬೀರಪ್ಪನಿಗೆ ಬೇರೆ ಮಹಿಳೆಯರ ಜೊತೆ ಅಕ್ರಮ ಸಂಬಂಧ ಇತ್ತು ಎಂಬ ಮಾಹಿತಿ ಇದೆ. ಆತನ ಮೊಬೈಲ್ನಲ್ಲಿ ಬೇರೆ ಮಹಿಳೆಯರ ಜೊತೆಗಿರುವ ಪೊಟೊಗಳು ಸಿಕ್ಕಿವೆ. ಇದೇ ಕಾರಣಕ್ಕೆ ಇಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು ಎಂಬ ಸಂಶಯವಿದೆ. ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದೇವೆ. ಕೊಲೆ ಹಿಂದೆ ಈತನೊಬ್ಬನದ್ದೇ ಪಾತ್ರ ಇದೆಯಾ ಅಥವಾ ಬೇರೆಯವರ ಕೈವಾಡ ಇದೆಯಾ ಎಂದು ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದರು.
ಒಟ್ಟಿನಲ್ಲಿ ಪ್ರೀತಿಸಿದ ಹುಡುಗನ ಜೊತೆಗೆ ಬದುಕಬೇಕು ಎನ್ನುವ ಆಸೆಯಿಂದ ಮದುವೆ ಮಾಡಿಕೊಂಡ ಯುವತಿ ತನ್ನ ಪತಿಯಿಂದಲೇ ಕೊಲೆಯಾಗಿದ್ದಾಳೆ. ಇದು ಅಡುಗೆಗಾಗಿ ನಡೆದ ಕೊಲೆಯೋ ಅಥವಾ ಪತಿಯ ಅನೈತಿಕ ಸಂಬಂಧಕ್ಕೆ ಪತ್ನಿ ಬಲಿಯಾಗಿದ್ದಾಳೋ ಎನ್ನೋದು ಪೊಲೀಸರ ತನಿಖೆಯಿಂದ ಹೊರಬರಬೇಕಿದೆ.