DAKSHINA KANNADA
ಲಾಕ್ ಡೌನ್ ಸಂದರ್ಭದಲ್ಲಿ ವಾಹನವಿಲ್ಲದೆ, ಆಹಾರವಿಲ್ಲದೆ ಹಸಿದಿದ್ದ ವ್ಯಕ್ತಿಗೆ ಸಹಾಯ ಹಸ್ತ ಚಾಚಿದ ಪುತ್ತೂರು ಗ್ರಾಮಾಂತರ ಠಾಣೆಯ ಸಿಬ್ಬಂದಿಗಳು
ಪುತ್ತೂರು, ಮೇ 11: ಲಾಕ್ ಡೌನ್ ಸಂದರ್ಭದಲ್ಲಿ ವಾಹನವಿಲ್ಲದೆ ಮಂಗಳೂರಿನಿಂದ ಮಡಿಕೇರಿಗೆ ನಡೆದುಕೊಂಡು ಹೋಗುವಾಗ ಆಹಾರವಿಲ್ಲದೆ ಹಸಿದಿದ್ದ ವ್ಯಕ್ತಿಗೆ ಆಹಾರ ಹಾಗು ವಾಹನದ ವ್ಯವಸ್ಥೆ ಮಾಡುವ ಮೂಲಕ ಪುತ್ತೂರು ಗ್ರಾಮಾಂತರ ಠಾಣೆಯ ಸಿಬ್ಬಂದಿಗಳು ಮಾನವೀಯತೆ ಮೆರೆದಿದ್ದಾರೆ.
ದಿನಾಂಕ 01-05-2021 ರಂದು ಮಡಿಕೇರಿಯ ರಾಣಿಪೇಟೆ ನಿವಾಸಿಯೊಬ್ಬರು ಕಳೆದ 5 ದಿನಗಳ ಹಿಂದೆ ಕೆಲಸಕ್ಕೆಂದು ಮಂಗಳೂರಿಗೆ ಬಂದು ಲಾಕ್ಡೌನ್ ಪರಿಣಾಮ ಕೆಲಸವಿಲ್ಲದೆ ಊರಿಗೆ ಮರಳಲು ಬಸ್ಸಿನ ಸೌಕರ್ಯವೂ ಇಲ್ಲದ ಕಾರಣ ಮಂಗಳೂರಿನಿಂದ ಮಡಿಕೇರಿಗೆ ನಡೆದುಕೊಂಡು ಹೋಗಲು ತೀರ್ಮಾನಿಸಿ ಹೋರಟಿದ್ದಾರೆ.
ಎರಡು ದಿನಗಳಿಂದ ಊಟ ಮಾಡದೇ ಹಸಿವಿನಿಂದ ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಸಂಟ್ಯಾರು ಎಂಬಲ್ಲಿ ಬಾವಲಿ ಹಾಗೂ ಹಕ್ಕಿಗಳು ತಿಂದು ಬಿದ್ದಂತಹ ಮಾವಿನ ಹಣ್ಣನ್ನು ತಿನ್ನುತ್ತಿರುವ ಬಗ್ಗೆ ಪತ್ರಕರ್ತರೊಬ್ಬರಿಂದ ಮಾಹಿತಿ ತಿಳಿದು ಪುತ್ತೂರು ಸಂಟ್ಯಾರು ಚೆಕ್ ಪಾಯಿಂಟ್ ಕರ್ತವ್ಯದಲ್ಲಿದ್ದ ಠಾಣಾ ಸಿಬ್ಬಂದಿ ದಯಾನಂದ ಹಾಗೂ ಕಿರಣ್ ರವರಿಗೆ ತಿಳಿಸಿದ್ದಾರೆ.
ಕರ್ತವ್ಯದಲ್ಲಿದ್ದ ಸಿಬ್ಬಂದಿ ಕೂಡಲೇ ಸ್ಪಂದಿಸಿ ಹಸಿವಿನಿಂದ ಕಂಗಾಲಾಗಿದ್ದ ಆತನಿಗೆ ಸಿಬ್ಬಂದಿಯವರು ತಮಗಾಗಿ ಮನೆಯಿಂದ ತಂದಿದ್ದ ಮಧ್ಯಾಹ್ನದ ಊಟವನ್ನು ಆ ವ್ಯಕ್ತಿಗೆ ನೀಡಿ, ನಂತರ ಒಂದು ವಾಹನದಲ್ಲಿ ಆ ವ್ಯಕ್ತಿಯನ್ನು ಮಡಿಕೇರಿಗೆ ಕಳುಹಿಸಿಕೊಟ್ಟಿರುತ್ತಾರೆ. ಲಾಕ್ ಡೌನ್ ನಂತಹ ಸಂಕಷ್ಟ ಸಮಯದಲ್ಲಿ ತಮ್ಮ ಕರ್ತವ್ಯದೊಂದಿಗೆ ಮಾನವೀಯತೆಯನ್ನು ಮೆರೆದ ಈ ಸಿಬ್ಬಂದಿಗಳ ಕಾರ್ಯ ಎಲ್ಲರಿಗೂ ಆದರ್ಶನೀಯವಾಗಿದೆ.