Connect with us

    KARNATAKA

    ಕಾರ್ಕಳ ಕೆರ್ವಾಶೆಯಲ್ಲಿ ಚಿರತೆ ದಾಳಿಗೆ ನೂರಾರು ಕೋಳಿಗಳ ಮಾರಣಹೋಮ, ಆತಕಂದಲ್ಲಿ ಜನ..!

    ಕೆರ್ವಾಶೆ ಗ್ರಾಮದ ಶೆಟ್ಟಿಬೆಟ್ಟು ಎಂಬಲ್ಲಿ ಕೋಳಿಫಾರ್ಮ್‌ಗೆ ನುಗ್ಗಿರುವ ಚಿರತೆ ನೂರಾರು ಕೋಳಿಗಳ ಮಾರಣಹೋಮ ಮಾಡಿ ಪರಾರಿಯಾಗಿದೆ. 
    ಕಾರ್ಕಳ : ಉಡುಪಿ ಜಿಲ್ಲೆ ಕಾರ್ಕಳ ಭಾಗದಲ್ಲಿ ಚಿರತೆಗಳ ಹಾವಳಿ ತೀವ್ರವಾಗಿದ್ದು ಜನ ಭಯಭೀತರಾಗಿದ್ದಾರೆ. 
    ತಾಲೂಕಿನ ಕೆರ್ವಾಶೆ ಗ್ರಾಮದ ಶೆಟ್ಟಿಬೆಟ್ಟು ಎಂಬಲ್ಲಿ ಕೋಳಿಫಾರ್ಮ್‌ಗೆ ನುಗ್ಗಿರುವ ಚಿರತೆ ನೂರಾರು ಕೋಳಿಗಳ ಮಾರಣಹೋಮ ಮಾಡಿ ಪರಾರಿಯಾಗಿದೆ. 
    ಕೆರ್ವಾಶೆ ನಿವಾಸಿ ವೆಂಕಟೇಶ್ ಶೆರ್ವೆಗಾರ್ ಅವರ ಕೋಳಿ ಫಾರ್ಮ್‌ಗೆ ಚಿರತೆ ಈ ಒಂದೇ ವಾರದಲ್ಲಿ ಎರಡು ಸಲ ದಾಳಿ ನಡೆಸಿದೆ.
    ಭಾನುವಾರ ಕೋಳಿಫಾರ್ಮ್‌ನ ಮೆಶ್‌ ಬಾಗಿಲನ್ನು ತಳ್ಳಿಕೊಂಡು ಒಳ ಪ್ರವೇಶಿಸಿದ್ದ ಚಿರತೆ ಒಂದಷ್ಟು ಕೋಳಿಗಳನ್ನು ತಿಂದು ಇನ್ನೊಂದಷ್ಟು ಕೋಳಿಗಳನ್ನು ಕೊಂದು ಹಾಕಿತ್ತು.

    ಅನಂತರ ಮನೆಯವರು ರಾತ್ರಿ ಇಡೀ ಕಾವಲು ಕಾಯುತ್ತಿದ್ದರು. ಎರಡು ದಿನ ಚಿರತೆ ಬಾರದ ಕಾರಣ ಮಂಗಳವಾರ ರಾತ್ರಿ 1.30 ತನಕ ಕಾದು ಕುಳಿತು ಬಳಿಕ ನಿದ್ದೆಗೆ ಶರಣಾಗಿದ್ದರು.

    ಇದಾದ ಸ್ವಲ್ಪ ಹೊತ್ತಿನಲ್ಲೇ ದಾಳಿ ಮಾಡಿರುವ ಚಿರತೆ ಮತ್ತೆ ಕೋಳಿಗಳನ್ನು ಕೊಂದು, ತಿಂದು ಹಾಕಿದೆ.

    ಎರಡು ರಾತ್ರಿಗಳಲ್ಲಿ ಸರಿ ಸುಮಾರು  200 ಕೋಳಿಗಳನ್ನು ಕೊಂದು ಹಾಕಿದ್ದು  ಇನ್ನು ತಿಂದ ಕೋಳಿಗಳ ಬಗ್ಗೆ ಮಾಹಿತಿ ಸಿಕ್ಕಿಲ್ಲ

    ಭಾನುವಾರ ದಾಳಿ ಮಾಡಿದಾಗಲೇ ಕೋಳಿ ಫಾರಂ ಮಾಲಿಕ ವೆಂಕಟೇಶ್‌ ಅರಣ್ಯ ಇಲಾಖೆಗೆ ದೂರು ನೀಡಿದ್ದರು.

    ಅರಣ್ಯ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿ ಚಿರತೆ ಹಿಡಿಯಲು ಬೋನು ಇರಿಸಿದ್ದರೂ ಚಾಣಾಕ್ಷ ಚಿರತೆ ಬೋನಿನೊಳಗೆ ಇರುವ ಎರಡು ಕೋಳಿಗಳ ಆಸೆಗೆ ಬಲಿಯಾಗದೆ ಬೇಕಾದಷ್ಟು ಕೋಳಿ ಇರುವ ಫಾರ್ಮ್‌ಗೆ ನುಗ್ಗಿದೆ.

    ವೆಂಕಟೇಶ್‌ ಕಂಪನಿಯವರಿಗೆ ಕೋಳಿಗಳನ್ನು ಸಾಕಿ ಕೊಡುತ್ತಿದ್ದು, ಕೋಳಿ ಮರಿ, ಫುಡ್‌ ಎಲ್ಲ ಅವರೇ ಒದಗಿಸುತ್ತಾರೆ.

    ಕೋಳಿಗಳು ಬೆಳೆದ ನಂತರ ಅವರೇ ಒಯ್ಯುತ್ತಾರೆ. ಚಿರತೆ ದಾಳಿಯಿಂದ ಕಂಪನಿಗೆ ಭಾರಿ ಪ್ರಮಾಣದಲ್ಲಿ ನಷ್ಟ ಸಂಭವಿಸಿದೆ.

    ವೆಂಕಟೇಶ್‌ಗೆ ಸಾಕಿದ ಹಣ ನಷ್ಟವಾಗಿದೆ. ಅರಣ್ಯ ಇಲಾಖೆ ಪರಿಹಾರ ಕೊಡಬೇಕೆಂದು ಅವರು ಒತ್ತಾಯಿಸಿದ್ದಾರೆ.

    ಅರಣ್ಯ ಇಲಾಖೆ ಇಂಥ ಘಟನೆಗಳಲ್ಲಿ ಪರಿಹಾರ ಕೊಡುತ್ತದೆ. ಕೋಳಿಯಾದರೆ ಒಂದು ಕೋಳಿಗೆ 50 ರೂ.ನಿಂದ ತೊಡಗಿ ಕೋಳಿಗಳ ಗಾತ್ರಕ್ಕನುಗುಣವಾಗಿ ಪರಿಹಾರ ನೀಡಲಾಗುವುದು. ನ್ಯಾಷನಲ್‌ ಡಿಸಾಸ್ಟರ್‌ ರೆಸ್ಪಾನ್ಸ್‌ ಫಂಡ್‌ (ಎಸ್‌ಡಿಆರ್‌ಎಫ್‌)ನಡಿ ಪರಿಹಾರ ನೀಡಲು ಅವಕಾಶವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮಾಳ ಘಾಟಿಗೆ ಒತ್ತಿಕೊಂಡಿರುವ ಶೆಟ್ಟಿಬೆಟ್ಟು ಪರಿಸರದಲ್ಲಿ ಕಾಡುಪ್ರಾಣಿಗಳ ಹಾವಳಿ  ವಿಪರೀತವಾಗಿದೆ.  ಕಳೆದ ವರ್ಷ ಚಿರತೆಯೊಂದು ದನಗಳನ್ನು ತಿಂದು ಹಾಕಿ ಈ ಪರಿಸರದಲ್ಲಿ ಆತಂಕ ಉಂಟುಮಾಡಿತ್ತು.

    ಚಿರತೆ ತಿನ್ನಲು ಪ್ರಾಣಿಗಳು ಸಿಗದಿದ್ದರೆ ಮನುಷ್ಯರ ಮೇಲೂ ದಾಳಿ ಮಾಡುವ ಭೀತಿ ಇದೀಗ ಗ್ರಾಮಸ್ಥರಲ್ಲಿ ಮನೆ ಮಾಡಿದೆ

    Share Information
    Advertisement
    Click to comment

    Leave a Reply

    Your email address will not be published. Required fields are marked *