ಮಾನವ ಕಳ್ಳಸಾಗಾಟ ಜಾಲಕ್ಕೆ ಸಿಲುಕಿದ್ದ ಜೆಸಿಂತಾ ಮರಳಿ ತಾಯ್ನಾಡಿಗೆ
ಉಡುಪಿ,ಸೆಪ್ಟಂಬರ್ 23: ಏಜೆಂಟ್‌ನಿಂದ ವಂಚನೆಗೊಳಗಾಗಿ ಸೌದಿಅರೇಬಿಯಾದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಕಾರ್ಕಳದ ಮುದರಂಗಡಿಯ ಜೆಸಿಂತಾ ಅವರನ್ನು ಭಾರತಕ್ಕೆ ಕರೆ ತರುವಲ್ಲಿ ಉಡುಪಿಯ ಮಾನವ ಹಕ್ಕುಗಳ ಪ್ರತಿಷ್ಠಾನ ಯಶಸ್ವಿಯಾಗಿದೆ. ಮಾಧ್ಯಮಗಳಿಗೆ ಈ ಕುರಿತು ಮಾಹಿತಿ ನೀಡಿದ ಉಡುಪಿಯ ಮಾನವ ಹಕ್ಕುಗಳ ಪ್ರತಿಷ್ಠಾನ ಸಂಚಾಲಕ ಡಾ|ರವೀಂದ್ರನಾಥ್ ಶ್ಯಾನುಭಾಗ್ ಅವರು ಮುಂಬಯಿಯ ಮಾನವ ಕಳ್ಳಸಾಗಾಣಿಕೆಯ ಜಾಲದ ಮೂಲಕ ಸೌದಿಅರೇಬಿಯಾಕ್ಕೆ ಸಾಗಿಸಲ್ಪಟ್ಟು “ಯಾಂಬೂ” ಪಟ್ಟಣದ ಅರಬ್ಬಿಯ ಮನೆಯೊಂದರಲ್ಲಿ ಗುಲಾಮಳಾಗಿ ದಿನದೂಡುತ್ತಿದ್ದ ಉಡುಪಿ ಜಿಲ್ಲೆಯ ಕಾರ್ಕಳದ ಮುದರಂಗಡಿಯ ಜೆಸಿಂತಾಳನ್ನು ಇದೀಗ ಅರೆ ಜೀವ ಸ್ಥಿತಿಯಲ್ಲಿ ಭಾರತಕ್ಕೆ ಕರೆತರಲಾಗಿದೆ.
ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನ ಕಳೆದ ಏಪ್ರಿಲ್ ತಿಂಗಳಲ್ಲಿ ಜೆಸಿಂತಾಳ ರಕ್ಷಣೆಗಾಗಿ ಗಲ್ಫ್ ಕನ್ನಡಿಗರಿಗೆ ನೀಡಿದ ಕರೆಗೆ ಸ್ಪಂದಿಸಿದ ಜೆಡ್ಡಾದ ಎನ್.ಆರ್.ಐ. ಪೋರಂನ ಅಧ್ಯಕ್ಷ ರೋಶನ್ ರಾಡ್ರಿಗಸ್ ಮತ್ತವರ ಸಂಗಡಿಗರ ಸತತ ಪ್ರಯತ್ನದ ಫಲವಾಗಿ 14 ತಿಂಗಳ ಬಳಿಕ ಆಕೆ ತನ್ನ ಮಕ್ಕಳನ್ನು ಸೇರಿಕೊಂಡಿದ್ದಾರೆ.
Jacintha Mendonca
ಪ್ರಕರಣದ ಹಿನ್ನಲೆ:
ಮುದರಂಗಡಿಯ ಜೆಸಿಂತಾಳ ಗಂಡ ತೀರಿಕೊಂಡಾಗ ತನ್ನ ಮೂರು ಮಕ್ಕಳ ಪಾಲನೆ ಹಾಗೂ ವಿದ್ಯಾಭ್ಯಾಸಕ್ಕಾಗಿ ಆಕೆ ಉದ್ಯೋಗದ ಹುಡುಕಾಟದಲ್ಲಿದ್ದಳು. ಕತಾರ್ ನಲ್ಲಿರುವ ಭಾರತೀಯ ಕುಟುಂಬವೊಂದಕ್ಕೆ ಮಕ್ಕಳ ಪಾಲನೆಗಾಗಿ ಮಹಿಳೆಯೋರ್ವಳ ಅಗತ್ಯವಿದೆ ಎಂದು ಸ್ಥಳಿಯ ಪತ್ರಿಕೆಯೊಂದರಲ್ಲಿ ಪ್ರಕಟವಾದ ಜಾಹೀರಾತಿನಿಂದ ತಿಳಿದ ಜೆಸಿಂತಾ ಮುಂಬಯಿಯ ರಿಕ್ರೂಟ್‍ಮೆಂಟ್ ಎಜೆನ್ಸಿಯನ್ನು ಸಂಪರ್ಕಿಸಿದ್ದಾರೆ.
ತಿಂಗಳಿಗೆ 25000 ರೂಪಾಯಿ ಕೊಡಿಸುವುದಾಗಿ ಎಜೆನ್ಸಿಯ ಮಾಲಕ ಶಾಬಾಜ್ ಖಾನ್ ಜೆಸಿಂತಾಗೆ ಆಮಿಷವೊಡ್ಡಿದ್ದ. ಯಾವುದೇ ಖರ್ಚುಗಳನ್ನು ತೆಗೆದುಕೊಳ್ಳದೇ ಪ್ರಯಾಣಕ್ಕೆ ಬೇಕಾಗಿರುವ ಪಾಸ್‍ಪೋರ್ಟ್ ಹಾಗೂ ವೀಸಾಗಳನ್ನು ಮಂಗಳೂರಿನಲ್ಲಿರುವ ತನ್ನ ಪ್ರತಿನಿಧಿಯ ಮೂಲಕ ಮಾಡಿಸುವ ಭರವಸೆಯನ್ನೂ ನೀಡಿದ್ದ.
ಆತನ ಮಾತಿನ ಮೇಲಿನ ವಿಶ್ವಾಸದಿಂದಾಗಿ ಮುಂಬಯಿಗೆ ತೆರಳಿದ ಜೆಸಿಂತಾಳನ್ನು ಕೆಲವು ದಿನಗಳ ತನಕ ಮುಂಬಯಿಯ ಡೊಂಗ್ರಿ ಎಂಬಲ್ಲಿ ಮನೆಯೊಂದರಲ್ಲಿ ಇರಿಸಲಾಗಿತ್ತು. ಅಲ್ಲಿಂದ ಗೋವಾ ಹಾಗೂ ದಿಲ್ಲಿಯ ಮೂಲಕ ಇನ್ನಿಬ್ಬರು ಯುವತಿಯರೊಂದಿಗೆ ಜೂನ್ 19 ರಂದು ದುಬೈಗೆ ಸಾಗಿಸಲಾಯಿತು.
ಅಲ್ಲಿಂದ ಯಾವ ದೇಶದ ವಿಮಾನವನ್ನೇರಿದೆ ಎಂದು ಆಕೆಗೆ ತಿಳಿಯಲೇ ಇಲ್ಲ. ಮರುದಿನ ಯಾವುದೋ ಒಂದು ನಿಲ್ದಾಣದಲ್ಲಿ ವಿಮಾನ ಇಳಿದಾಗ ತಾನು ಬಂದಿದ್ದು ಕತಾರ್ ದೇಶಕ್ಕಲ್ಲ, ಸೌದಿ ಅರೇಬಿಯಾಕ್ಕೆ ಎಂದು ತಿಳಿದ ಜೆಸಿಂತಾಗೆ ಆಕಾಶವೇ ಕಳಚಿಬಿದ್ದಂತಾಗಿತ್ತು.