KARNATAKA
ಹುಬ್ಬಳಿ ಸಿಲಿಂಡರ್ ಸ್ಪೋಟ ಪ್ರಕರಣ – ಚಿಕಿತ್ಸೆ ಫಲಕಾರಿಯಾಗದೇ ಇಬ್ಬರು ಮಾಲಾಧಾರಿಗಳು ನಿಧನ
ಹುಬ್ಬಳ್ಳಿ ಡಿಸೆಂಬರ್ 26: ಸಾಯಿನಗರ ಅಚ್ಚವ್ವನ ಕಾಲೋನಿಯ ಈಶ್ವರ ದೇವಸ್ಥಾನದಲ್ಲಿ ಸಿಲಿಂಡರ್ ಸ್ಪೋಟದಿಂದ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ. ಮೃತರನ್ನು ನಿಜಲಿಂಗಪ್ಪ ಬೇಪುರಿ ( 58 ವರ್ಷ) ಹಾಗೂ ಸಂಜಯ ಸವದತ್ತಿ (18) ಎಂದು ಗುರುತಿಸಲಾಗಿದೆ.
ಕಳೆದ ಭಾನುವಾರ ಅಯ್ಯಪ್ಪಸ್ವಾಮಿ ವ್ರತಧಾರಿಗಳು ಪೂಜೆ ಸಲ್ಲಿಸಿ ರಾತ್ರಿ ನಿದ್ರೆಗೆ ಜಾರಿದಾಗ ಗೃಹ ಬಳಕೆಯ ಅನಿಲ ಸೋರಿಕೆಯಾಗಿ ಕೋಣೆ ತುಂಬೆಲ್ಲ ಬೆಂಕಿ ಆವರಿಸಿಕೊಂಡು ಬಾಲಕ ಸೇರಿ ಒಂಭತ್ತು ಮಾಲಾಧಾರಿಗಳು ಸುಟ್ಟು ಹೋಗಿದ್ದರು. ಇವರಲ್ಲಿ ಬಾಲಕ ಹೊರತುಪಡಿಸಿ ಉಳಿದವರೆಲ್ಲರು ಶೇ. 80ಕ್ಕೂ ಹೆಚ್ಚು ಪ್ರಮಾಣದಲ್ಲಿ ಸುಟ್ಟು ಗಾಯಗೊಂಡಿದ್ದರು. ಅವರೆಲ್ಲರು ಕೆಎಂಸಿಆರ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ಬೆಳಗಿನ ಜಾವ ಚಿಕಿತ್ಸೆಗೆ ಸ್ಪಂದಿಸದೆ ನಿಜಲಿಂಗಪ್ಪ ಮತ್ತು ಸಂಜಯ ಮೃತಪಟ್ಟಿದ್ದಾರೆ. ಇನ್ನುಳಿದ ಆರು ಜನರ ಸ್ಥಿತಿ ಚಿಂತಾಜನಕವಾಗಿದೆ.