KARNATAKA
ತಲಕಾವೇರಿಯಲ್ಲಿ ಹುಡುಗಿಯರ ಇನ್ ಸ್ಟಾಗ್ರಾಮ್ ರೀಲ್ ಡ್ಯಾನ್ಸ್ ವಿಡಿಯೋ – ಕೊಡವ ಸಮುದಾಯದ ಆಕ್ರೋಶ
ಕೊಡಗು : ಕಾವೇರಿಯ ಉಗಮ ಸ್ಥಾನ ಕೊಡಗಿನ ತಲಕಾವೇರಿಯಲ್ಲಿ ಮೂವರು ಯುವತಿಯರು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲು ಮಾಡಿರುವ ಡಾನ್ಸ್ ಸಾಮಾಜಿಕ ಜಾಲತಾಣಗಳಲ್ಲಿ ವಿವಾದ ಸೃಷ್ಟಿಸಿದೆ.ಮೂವರು ಹುಡುಗಿಯರು ಇದೀಗ ಕೊಡವ ಸಮುದಾಯದ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಮೂವರು ಯುವತಿಯರು ತಲಕಾವೇರಿಯ ಮುಖ್ಯ ದ್ವಾರದ ಬಳಿ ಮಂಜು ಮುಸುಕಿದ ವಾತಾವರಣದಲ್ಲಿ ಕೆಲ ಸೆಕೆಂಡ್ಗಳ ಕಾಲ ಡಾನ್ಸ್ ಮಾಡಿದ್ದಾರೆ. ನೃತ್ಯದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಆದರೆ ಈ ಡಾನ್ಸ್ಗೆ ನೆಟ್ಟಿಗರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಮೂವರು ತಲಕಾವೇರಿ ದೇವಸ್ಥಾನ ಪ್ರವೇಶದ್ವಾರದಲ್ಲಿ ಇನ್ ಸ್ಟಾಗ್ರಾಮ್ ರೀಲ್ ಅನ್ನು ಚಿತ್ರೀಕರಿಸಿದರು. ಜೊತೆಗೆ ಅದನ್ನು ಇನ್ ಸ್ಟಾಗ್ರಾಮ್ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪೋಸ್ಟ್ ಮಾಡಿದರು. ಈ ಮೂಲಕ ಈ ಯುವತಿಯರು ಪವಿತ್ರ ಸ್ಥಳವನ್ನು ಅಪವಿತ್ರಗೊಳಿಸಿದ್ದಾರೆ ಎಂದು ಕೊಡವ ಸಮುದಾಯ ಆರೋಪಿಸಿದೆ. ವೀಡಿಯೊವನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು ಪೊಲೀಸರಿಗೆ ದೂರು ನೀಡುವ ಎಚ್ಚರಿಕೆಯನ್ನು ನೀಡಿದೆ.
ಈ ಬೆಳವಣಿಗೆಗಳ ನಂತರ, ಹುಡುಗಿಯರು ಕೊಡವ ಸಮುದಾಯ ಮತ್ತು ಕಾವೇರಿ ನದಿಯ ಭಕ್ತರಲ್ಲಿ ಕ್ಷಮೆಯಾಚಿಸುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಸ್ಥಳದ ಪಾವಿತ್ರ್ಯತೆಗೆ ಧಕ್ಕೆ ತರುವ ಉದ್ದೇಶದಿಂದ ವೀಡಿಯೋ ಮಾಡಿಲ್ಲ ಎಂದು ಹೇಳಿಕೆ ನೀಡಿದ್ದು, ಇದೀಗ ಅದನ್ನು ತೆಗೆದುಹಾಕಲಾಗಿದೆ.