FILM
ನಟ ಅನಂತ್ ನಾಗ್ ಸೇರಿದಂತೆ ಮೂವರಿಗೆ ಗೌರವ ಡಾಕ್ಟರೇಟ್

ಬೆಂಗಳೂರು , ಜುಲೈ 14: ಕನ್ನಡದ ಹೆಸರಾಂತ ನಟ ಅನಂತ್ ನಾಗ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಮೂವರು ಸಾಧಕರಿಗೆ ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯವು ಗೌರವ ಡಾಕ್ಟರೇಟ್ ಘೋಷಿಸಿದೆ.
ಸಿನಿಮಾ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ ಅನಂತ್ ನಾಗ್, ಹೆಸರಾಂತ ಶಹನಾಯಿ ವಾದಕ, ಬಿಸ್ಮಿಲ್ಲಾ ಖಾನ್ ಶಿಷ್ಯರಾದ ಎಸ್. ಬಲ್ಲೇಶ್ ಭಜಂತ್ರಿ ಹಾಗೂ ತಂತ್ರಜ್ಞಾನ ಕ್ಷೇತ್ರಕ್ಕೆ ಅಪಾರ ಸೇವೆ ಸಲ್ಲಿಸಿರುವ ಶರತ್ ಶರ್ಮಾ ಈ ಸಾಲಿಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಲಾಗಿದೆ ಎಂದು ಕುಲಪತಿ ಪ್ರೊ. ನಿರಂಜನ ವಾನಳ್ಳಿ ತಿಳಿಸಿದ್ದಾರೆ.

ಕೋಲಾರದ ನಂದಿನಿ ಪ್ಯಾಲೇಸ್ ನಲ್ಲಿ ಈ ಗೌರವ ಪ್ರದಾನ ಸಮಾರಂಭವು ಇದೇ ಶುಕ್ರವಾರ ನಡೆಯಲಿದ್ದು, ಘಟಿಕೋತ್ಸವದ ಸಮಾರಂಭದಲ್ಲಿ ಕುಲಾಧಿಪತಿಗಳಾದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪದವಿ ನೀಡಿ ಗೌರವಿಸಲಿದ್ದಾರೆ. ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ ನಾರಾಯಣ ಸೇರಿದಂತೆ ಹಲವರು ಈ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
ಇದೇ ಸಂದರ್ಭದಲ್ಲಿ ವಿಶ್ವವಿದ್ಯಾನಿಲಯದ ಮೊದಲ ಘಟಿಕೋತ್ಸವ ನಡೆಯಲಿದ್ದು, ವಿವಿಧ ವಿಷಯಗಳಲ್ಲಿ ರಾಂಕ್ ಪಡೆದಿರುವ 41 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಕೂಡ ನಡೆಯಲಿದೆ. ಇದು ಈ ವಿವಿಯ ಮೊದಲ ಘಟಿಕೋತ್ಸವವಾಗಿದೆ.