Connect with us

DAKSHINA KANNADA

ಪ್ರಧಾನಿ ನರೇಂದ್ರ ಮೋದಿ ತವರಿಗೆ ದಕ್ಷಿಣಕನ್ನಡ ಜಿಲ್ಲೆಯ ಜೇನು ಕುಟುಂಬ…

ಪುತ್ತೂರು, ಸೆಪ್ಟೆಂಬರ್ 23: ಪ್ರಧಾನಿ ನರೇಂದ್ರ ಮೋದಿಯವರ ಕನಸಾದ ಮಧು ಕಾಂತ್ರಿಯನ್ನು ನನಸು ಮಾಡಲು ದೇಶದೆಲ್ಲೆಡೆ ಜೇನು ಕೃಷಿಯ ಮೇಲೆ ಒಲವು ಹೆಚ್ಚಾಗುತ್ತಿದೆ. ಅದರಲ್ಲೂ ಪ್ರಧಾನಿ ತವರು ಗುಜರಾತ್ ನ ರೈತರು ಜೇನು ಸಾಕಾಣಿಕೆಗೆ ಹೆಚ್ಚಿನ ಒತ್ತು ನೀಡಲು ಆರಂಭಿಸಿದ್ದಾರೆ.

ಗುಜರಾತ್ ರೈತರಿಗೆ ಜೇನು ಸಾಕಾಣಿಕೆಯ ಬಗ್ಗೆ ಹೆಚ್ಚಿನ ತರಭೇತಿ ನೀಡಲು ದಕ್ಷಿಣಕನ್ನಡ ಜಿಲ್ಲೆಯ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಜೇನು ಉತ್ಪಾದಕರೊಬ್ಬರು ಗುಜರಾತ್ ಗೆ ತೆರಳಲಿದ್ದಾರೆ. ಈಗಾಗಲೇ ದಕ್ಷಿಣಕನ್ನಡ ಜಿಲ್ಲೆಯ 100 ಜೇನು ಕುಟುಂಬಗಳನ್ನು ಗುಜರಾತ್ ಗೆ ರವಾನಿಸಿರುವ ಇವರಿಗೆ ಒಟ್ಟು 1 ಸಾವಿರ ಜೇನು ಕುಟುಂಬಗಳನ್ನು ಗುಜರಾತ್ ನಲ್ಲಿ ಬೆಳೆಸುವ ಜವಾಬ್ದಾರಿಯನ್ನು ನೀಡಲಾಗಿದೆ.

ಹೌದು ಜೇನು ಕೃಷಿಯಲ್ಲಿ ಅಪ್ರತಿಮ ಸಾಧನೆ ತೋರುತ್ತಿರುವ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆಟ್ಟಂಪಾಡಿಯ ಯುವಕ ಮನಮೋಹನ್ ಆರಂಬ್ಯ ತುಡುವೆ ಜೇನಿನ ಸಿಹಿಯನ್ನು ರಾಷ್ಟ್ರಮಟ್ಟದಲ್ಲಿ ಪಸರಿಸುವಲ್ಲಿ ಹೆಜ್ಜೆ ಇರಿಸಿದ್ದು ಗುಜರಾತ್‍ನಲ್ಲಿಯು ಇವರ ಜೇನು ಕೃಷಿಗೆ ಬೇಡಿಕೆ ವ್ಯಕ್ತವಾಗಿದೆ.

ಜೇನು ಕೃಷಿಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕರ್ನಾಟಕ ರಾಜ್ಯದ ಜೇನು ಉತ್ಪಾದನೆಯಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ಇರುವ ಇವರು ರಾಜ್ಯದಾದ್ಯಂತ ಜೇನು ಮತ್ತು ಕುಟುಂಬಗಳನ್ನ ಒದಗಿಸಿಕೊಟ್ಟು ಜೇನು ಕೃಷಿಕರಿಗೆ ಪ್ರೇರಣೆಯಾಗಿದ್ದಾರೆ. ಜೇನು ಕೃಷಿಯಲ್ಲಿನ ಇವರ ಸಾಧನೆ ಮತ್ತು ಯಶಸ್ಸನ್ನು ಗುರುತಿಸಿಕೊಂಡ ಗುಜರಾತ್ ನ ಕೃಷಿಕರಿಂದ
1000 ಪೆಟ್ಟಿಗೆಗೆ ಬೇಡಿಕೆ ಬಂದಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸು ಆಗಿರುವ ಮಧು ಕ್ರಾಂತಿಯ ಕಲ್ಪನೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರಯೋಗಾತ್ಮಕ ವಾಗಿ ಮನಮೋಹನ್ ಅವರು ಗುಜರಾತ್‍ಗೆ 100 ಜೇನು ಕುಟುಂಬಗಳನ್ನು ಕಳುಹಿಸಿದ್ದಾರೆ. ಈಗಾಗಲೇ 1000 ಜೇನು ಕುಟುಂಬದ ಪೆಟ್ಟಿಗೆಗೆ ಬೇಡಿಕೆ ವ್ಯಕ್ತವಾಗಿದೆ. ಈ ಮೂಲಕ ರಾಜ್ಯದಾದ್ಯಂತ ಜೇನು ಕೃಷಿಯಲ್ಲಿ ಹೆಸರುವಾಸಿಯಾಗಿರುವ ಮನಮೋಹನ್ ರಾಷ್ಟ್ರದಾದ್ಯಂತ ತುಡುವೆ ಜೇನಿನ ಸಿಹಿ ಹಂಚಲು ಹೊರಟಿದ್ದಾರೆ.

ಮನಮೋಹನ 8ನೇ ತರಗತಿಯಲ್ಲಿ ಇರುವಾಗಲೇ ಜೇನು ಕೃಷಿಗೆ ತೊಡಗಿದ್ದರು. ಕೇವಲ ಒಂದು ಪೆಟ್ಟಿಗೆಯಿಂದ ಆರಂಭಗೊಂಡ ಕಾಯಕ ನಾಲ್ಕು ಸಾವಿರ ದಾಟಿದೆ. ಒಂದು ಪೆಟ್ಟಿಗೆಯಿಂದ ಗರಿಷ್ಠ 48.6 ಕಿಲೋ ಜೇನು ಸಂಗ್ರಹಿಸಿದ್ದೂ ಇದೆ. ಬೆಟ್ಟಂಪಾಡಿಯಿಂದ ತೊಡಗಿ ರಾಜ್ಯದ ನಾನಾ ಕಡೆಗಳಲ್ಲಿ ಜೇನು ಪೆಟ್ಟಿಗೆ ಇರಿಸಿದ್ದಾರೆ. ಇವರ ಜಾಗದಲ್ಲಿ ಅಲ್ಲ, ಯಾರದ್ದೋ ಜಮೀನಿನಲ್ಲಿ. ಸ್ಥಳ ಬಾಡಿಗೆಯಾಗಿ ಮಾಲಕನಿಗೆ ಒಂದಷ್ಟು ಜೇನು ಮತ್ತು ಪರಾಗಸ್ಪರ್ಶದಿಂದ ಫಸಲು ಹೆಚ್ಚಳವಾಗಿದೆ.

ವಾರ್ಷಿಕವಾಗಿ 20,000 ಕೆ. ಜಿ. ಜೇನು, 450 ಕೆ. ಜಿ. ಮೇಣ ಸಂಗ್ರಹ, 4000 ಜೇನುಕುಟುಂಬ ಮಾರಾಟ ಮನಮೋಹನರ ಸಾಧನೆ. ‘ಹನಿ ವರ್ಲ್ಡ್’ ಇವರ ಬ್ರಾಂಡ್. ಜೇನು ಕುಟುಂಬ ಮಾರಾಟ ಮಾಡುವ, ಹಾಗು ಶುದ್ಧ ಜೇನು ಸಂಗ್ರಹಿಸುವ ಕರ್ನಾಟಕದ ಏಕೈಕ ಯುವ ಕೃಷಿಕ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಕೇರಳ, ಕರ್ನಾಟಕ ರಾಜ್ಯದ ದಕ್ಷಿಣಕನ್ನಡ, ಕೊಡಗು, ಚಿತ್ರದುರ್ಗ ಹೀಗೆ ನಾನಾ ಕಡೆಗಳಲ್ಲಿ ಮನಮೋಹನ ಅವರ ಜೇನಿನ ಪೆಟ್ಟಿಗೆ ಇದೆ. ಜೇನು ಕೃಷಿಯಲ್ಲೇ ಸುಮಾರು 20 ಜನರಿಗೆ ನೇರ ಉದ್ಯೋಗ ನೀಡುತ್ತಿರುವ ಮನಮೋಹನ್ ಜೇನಿನ ಕೃಷಿ ತನ್ನ ಅಗಾಧ ಅನುಭವವನ್ನು ಜೇನು ಸಾಕಾಣಿಕೆಗಾಗಿ ತಮ್ಮ ಬಳಿ ಬರುವವರಿಗೆಲ್ಲಾ ಧಾರೆ ಎರೆದಿದ್ದಾರೆ.

ಗುಜರಾತಿನಿಂದ 1000 ತುಡುವೆ ಜೇನಿನ ಕುಟುಂಬಕ್ಕೆ ಬೇಡಿಕೆ ವ್ಯಕ್ತವಾಗಿದೆ. 100 ಪೆಟ್ಟಿಗೆ, ಕುಟುಂಬವನ್ನು ಒದಗಿಸಿದ್ದೇನೆ. ನಾಲ್ಕು ದಿನದಲ್ಲಿ ಅಲ್ಲಿಗೆ ತೆರಳಿ ಕೃಷಿಗೆ ಸಹಕಾರ ನೀಡಲಿದ್ದೇನೆ. ಈಗಾಗಲೇ ವಾರ್ಷಿಕವಾಗಿ ಜೇನು ಕೃಷಿಯಿಂದ 20 ಟನ್ ಜೇನು ಉತ್ಪಾದನೆ ಆಗುತ್ತಿದೆ ಎನ್ನುತ್ತಾರೆ ಜೇನು ಕೃಷಿಯಲ್ಲಿ ಸಾಧನೆ ಯಶಸ್ಸನ್ನು ಕಂಡಿರುವ ಮನಮೋಹನ್ ಆರಂಬ್ಯ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *