LATEST NEWS
ಅಡಿಕೆಗೆ ಭವಿಷ್ಯವಿಲ್ಲ ಎಂದ ಗೃಹ ಸಚಿವರ ಹೇಳಿಕೆಯಲ್ಲಿ ದೊಡ್ಡ ದೊಡ್ಡ ಕುಳಗಳ ಕೈವಾಡ – ರಮಾನಾಥ ರೈ
ಮಂಗಳೂರು ಡಿಸೆಂಬರ್ 31: ಅಡಿಕೆ ಬೆಳೆಗೆ ಭವಿಷ್ಯವಿಲ್ಲ ಎಂದು ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿಕೆಯಲ್ಲಿ ದೊಡ್ಡ ದೊಡ್ಡ ಕುಳಗಳ ಕೈವಾಡವಿದೆ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ. ರಮಾನಾಥ ರೈ ಆರೋಪಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಅಡಕೆ ಬೆಳೆಯ ಬಗ್ಗೆ ಬಗ್ಗೆ ಗೃಹ ಸಚಿವರ ಹೇಳಿಕೆ ಆತಂಕಕಾರಿಯಾಗಿದ್ದು, ಅಡಕೆ ಲಾಭದಾಯಕ ಕೃಷಿಯಾಗಿದ್ದು, ಕರಾವಳಿ, ಮಲೆನಾಡಿನ ಕೃಷಿಕರು ಇದನ್ನು ಹೆಚ್ಚಾಗಿ ಅವಲಂಬಿಸಿದ್ದಾರೆ. ಅಡಕೆ ಬೆಳೆ ಕೂಡ ವಿಸ್ತರಣೆಯಾಗಿದೆ. ಕೋವಿಡ್ ಸಂದರ್ಭ ಅಡಕೆ ಬೆಲೆ ಹೆಚ್ಚಳವಾದ ಕಾರಣ ಈ ಭಾಗಕ್ಕೆ ರಕ್ಷೆಯಾಗಿತ್ತು. ಇತ್ತೀಚೆಗೆ ಅಡಕೆ ದರವೂ ಕ್ವಿಂಟಾಲ್‌ಗೆ 55 ಸಾವಿರದಿಂದ 40 ಸಾವಿರಕ್ಕೆ ಕುಸಿತ ಕಂಡಿದೆ. ಹೀಗಿರುವಾಗ ಗೃಹ ಸಚಿವರ ಹೇಳಿಕೆ ಆತಂಕಕಾರಿಯಾಗಿದ್ದು, ಈ ರೀತಿ ಹೇಳಿಕೆ ನೀಡುವ ಬದಲು ಬರ್ಮಾ, ವಿಯೆಟ್ನಾಂನಿಂದ ಅಡಕೆ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಲಿ ಎಂದರು.
ಪ್ರಸ್ತುತ ಕೇಂದ್ರ, ರಾಜ್ಯದಲ್ಲಿಅಧಿಕಾರ ನಡೆಸುತ್ತಿರುವುದು ಬಂಡವಾಳಶಾಹಿ, ಶ್ರೀಮಂತರ ಜೇಬು ತುಂಬಿಸುವ ಸರಕಾರ. ಗೃಹ ಸಚಿವರ ಹೇಳಿಕೆಯಿಂದ ಮಾರುಕಟ್ಟೆ ಮೇಲೆ ಪರಿಣಾಮ ಆಗುತ್ತದೆ. ಸರಕಾರ ರೈತರ ಬೆನ್ನೆಲುಬು ಮುರಿಯುವ ಬದಲು ಬೆಳೆಗಾರರನ್ನು ಉಳಿಸುವ ಕೆಲಸ ಮಾಡಲಿ ಎಂದರು.