Connect with us

    DAKSHINA KANNADA

    ಉಪ್ಪಿನಂಗಡಿಯಲ್ಲಿ‌ ಹಿಜಬ್ ಗಲಾಟೆ….ಪರಿಸ್ಥಿತಿ ಕೈ ಮೀರಿದಾಗ ವಿದ್ಯಾರ್ಥಿಗಳನ್ನು ಚದುರಿಸಿದ ಪೋಲೀಸರು….

    ಉಪ್ಪಿನಂಗಡಿ ಫೆಬ್ರವರಿ 17: ಉಡುಪಿಯಲ್ಲಿ ಪ್ರಾರಂಭವಾದ ಹಿಜಬ್ ವಿವಾದ ಇದೀಗ ದಕ್ಷಿಣಕನ್ನಡ ಜಿಲ್ಲೆಗೂ ಹಬ್ಬಿದ್ದು, ಉಪ್ಪಿನಂಗಡಿಯಲ್ಲಿ ಹಿಜಬ್ ಗಲಾಟೆ ನಿಯಂತ್ರಣಕ್ಕೆ ತರಲು ಪೊಲೀಸರು ವಿಧ್ಯಾರ್ಥಿಗಳ ಮೇಲೆ ಲಘುಲಾಠಿ ಪ್ರಹಾರ ನಡೆಸಿದ ಘಟನೆ ನಡೆದಿದೆ.


    ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಿನ್ನೆ 75 ಕ್ಕೂ ಮಿಕ್ಕಿದ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿ ಹಾಜರಾಗಿದ್ದರು. ಹೈಕೋರ್ಟ್ ಆದೇಶದ ಹಿನ್ನಲೆಯಲ್ಲಿ ಕಾಲೇಜಿನ ಪ್ರಾಂಶುಪಾಲರು ಹಿಜಾಬ್ ತೆಗೆದು‌ ತರಗತಿಯಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ವಿದ್ಯಾರ್ಥಿನಿಯರು ಹೈಕೋರ್ಟ್ ಆದೇಶ ಬರುವ ತನಕ ಕಾಲೇಜಿಗೆ ಬರುವುದಿಲ್ಲ ಎಂದು ಪ್ರಾಂಶುಪಾಲರ ಬಳಿ ಹೇಳಿ ಮನೆಗೆ ತೆರಳಿದ್ದರು‌.


    ಇಂದು ಮತ್ತೆ ಹಿಜಾಬ್ ಧರಿಸಿ ಕಾಲೇಜಿಗೆ‌ ಬಂದ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ಮತ್ತೆ ಹಿಜಾಬ್ ಧರಿಸಿ ತರಗತಿಗೆ ಪ್ರವೇಶಿಸದಂತೆ ಮನವಿ ಮಾಡಿದ್ದಾರೆ. ಆದರೆ ವಿದ್ಯಾರ್ಥಿನಿಯರಿಗೆ ಒಂದು ಸಮುದಾಯದ ವಿದ್ಯಾರ್ಥಿಗಳ ಗುಂಪು ಬೆಂಬಲ ಸೂಚಿಸಿದ್ದು, ಹಿಜಾಬ್ ಧರಿಸಿಯೇ ತರಗತಿಗೆ ಬಿಡುವಂತೆ ಪಟ್ಟು ಹಿಡಿದಿದೆ. ಈ ನಡುವೆ ಸಮವಸ್ತ್ರ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ಒತ್ತಾಯಿಸಿ ಇನ್ನೊಂದು ಸಮುದಾಯದ ವಿದ್ಯಾರ್ಥಿಗಳ ಗುಂಪು ಪ್ರಾಂಶುಪಾಲರನ್ನು ಆಗ್ರಹಿಸಿದೆ.


    ಈ ಸಂದರ್ಭದಲ್ಲಿ ಕಾಲೇಜು ಆವರಣದಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣಗೊಂಡ ಹಿನ್ನಲೆಯಲ್ಲಿ ಪೋಲೀಸರು ಗುಂಪು ಸೇರಿದ ವಿದ್ಯಾರ್ಥಿಗಳನ್ನು ಚದುರಿಸಿದ್ದಾರೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಹಿನ್ನಲೆಯಲ್ಲಿ ಕಾಲೇಜು ಪ್ರಾಂಶುಪಾಲ ಸುಬ್ಬಪ್ಪ ಕೈಕಂಬ ಕಾಲೇಜಿಗೆ ಎರಡು ದಿನಗಳ ರಜೆಯನ್ನು ಘೋಷಿಸಿದ್ದಾರೆ.

    ತಮಗೆ ತರಗತಿ ನಡೆಸುವಂತೆ ಒಂದು ಗುಂಪಿನ ವಿದ್ಯಾರ್ಥಿಗಳು ಮತ್ತೆ ಪ್ರಾಂಶುಪಾಲರಿಗೆ ಮನವಿ ಮಾಡಿದ ಸಂದರ್ಭದಲ್ಲಿ ಇನ್ನೊಂದು ಗುಂಪು ಹಿಜಾಬ್ ಧರಿಸಿಯೇ ತಮಗೆ ತರಗತಿಯಲ್ಲಿ ಕೂರಲು ಅನುಮತಿ ನೀಡಬೇಕೆಂದು ಒತ್ತಾಯಿಸಿದ ಹಿನ್ನಲೆಯಲ್ಲಿ ಪೋಲೀಸರು ಎರಡೂ ಗುಂಪುಗಳನ್ನು ಲಾಠಿ ಬೀಸಿ ಚದುರಿಸಿದ್ದಾರೆ.

    ಹಿಜಾಬ್ ವಿಚಾರದಲ್ಲಿ ಕಾಲೇಜಿಗೆ ರಜೆ ನೀಡಿದ ಪ್ರಾಂಶುಪಾಲರ ಕ್ರಮಕ್ಕೆ ಕಾಲೇಜಿನ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೆಲವೇ ವಿದ್ಯಾರ್ಥಿಗಳ ಹಠದಿಂದಾಗಿ ತಮ್ಮ ಶಿಕ್ಷಣಕ್ಕೂ ತೊಂದರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply