DAKSHINA KANNADA
ಜನಪ್ರತಿನಿಧಿ, ಅಧಿಕಾರಿಗಳಿಗೆ ಬಿಸಿ ಮುಟ್ಟಿದರೆ ಕೇಸು, ಜನಸಾಮಾನ್ಯನ ಸಮಸ್ಯೆಗೆ ಮಾತ್ರ ಕೇರ್ ಲೆಸ್ಸು !

ಜನಪ್ರತಿನಿಧಿ, ಅಧಿಕಾರಿಗಳಿಗೆ ಬಿಸಿ ಮುಟ್ಟಿದರೆ ಕೇಸು, ಜನಸಾಮಾನ್ಯನ ಸಮಸ್ಯೆಗೆ ಮಾತ್ರ ಕೇರ್ ಲೆಸ್ಸು !
ಮಂಗಳೂರು, ಜುಲೈ 9: ಜನಸಾಮಾನ್ಯನಿಗೆ ಎಷ್ಟೇ ಸಮಸ್ಯೆಯಾಗಲೀ, ಟ್ರಾಫಿಕ್ ಜಾಮ್ ಆಗಿ ರಸ್ತೆಯಲ್ಲೇ ತಾಸುಗಟ್ಟಲೆ ಕಾಯಲಿ ಈ ಬಗ್ಗೆ ಯಾರೂ ತಲೆನೇ ಕೆಡಿಸಿಕೊಳ್ಳಲ್ಲ.
ಆದರೆ ಇದೇ ಸಮಸ್ಯೆ ಜನಪ್ರತಿನಿಧಿಗೋ, ಅಧಿಕಾರಿಗೋ ಆದಲ್ಲಿ ಟ್ರಾಫಿಕ್ ಕ್ಲಿಯರ್ ಮಾಡಬೇಕಾದ ಪೋಲೀಸರು ಎದ್ದು-ಬಿದ್ದು ಬಂದು ಟ್ರಾಫಿಕ್ ಕ್ಲಿಯರ್ ಮಾಡುತ್ತಾರೆ.

ಹೌದು ಇಂಥಹುದೊಂದು ಘಟನೆ ಜುಲೈ 8 ರಂದು ಪಾಣೆ ಮಂಗಳೂರಿನಲ್ಲಿ ನಡೆದಿದೆ.
ಇಲ್ಲಿನ ಸೇತುವೆಯ ಬಳಿ, ಹೆದ್ದಾರಿ ಪಕ್ಕದಲ್ಲೇ ಸಾಗರ್ ಹೆಸರಿನ ಹೊಸ ಮದುವೆ ಹಾಲ್ ಒಂದು ತಲೆ ಎತ್ತಿದೆ.
ಮದುವೆಯ ಕಾರ್ಯಕ್ರಮಕ್ಕೆ ಬಂದ ಅತಿಥಿಗಳು ಹೆದ್ದಾರಿಯ ಎರಡೂ ಬದಿಗಳಲ್ಲಿ ದನ ನುಗ್ಗಿಸಿದಂತೆ ಕಾರುಗಳನ್ನು ನುಗ್ಗಿಸಿ ಪಾರ್ಕ್ ಮಾಡಿದ್ದರು.
ಹೀಗೆ ಪಾರ್ಕ್ ಮಾಡಿದ್ದರಿಂದಾಗಿ ರಾಷ್ಟ್ರೀಯ ಹೆದ್ದಾರಿ 75 ಗಂಟೆಗಟ್ಟಲೆ ಬ್ಲಾಕ್ ಆಗಿತ್ತು.
ಆದರೆ ಇದ್ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದ ಹಾಲ್ ನ ಮಾಲಕ ಹಾಗೂ ಬಂಟ್ವಾಳ ಪೋಲೀಸರು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಹಾಕಿಕೊಂಡ ಜನ ಸಾಯಲಿ ಎನ್ನುವ ಮನಸ್ಥಿತಿಯಲ್ಲಿದ್ದರು.
ಆದರೆ ಇದೇ ಸಂದರ್ಭದಲ್ಲಿ ಪುತ್ತೂರಿಗೆ ಭೇಟಿ ನೀಡಿ ಮಂಗಳೂರಿನ ಕಡೆಗೆ ಹಿಂದಿರುಗುತ್ತಿದ್ದ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹಾಗೂ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಈ ರಸ್ತೆಯಲ್ಲಿ ಆಗಮಿಸುತ್ತಿದ್ದರು.
ಬ್ಲಾಕ್ ನಲ್ಲಿ ಈ ಇಬ್ಬರೂ ಸಿಲುಕಿರುವ ವಿಚಾರ ತಿಳಿದ ಬಂಟ್ವಾಳ ಪೋಲೀಸರು ಸ್ಥಳಕ್ಕೆ ಧಾವಿಸಿ ಬಂದು ಟ್ರಾಫಿಕ್ ಕ್ಲಿಯರ್ ಮಾಡಿ ಈ ಇಬ್ಬರು ಗಣ್ಯ ವ್ಯಕ್ತಿಗಳನ್ನು ಕಳುಹಿಸಿದ ಬಳಿಕ ಗಂಟೆಗಟ್ಟಲೆ ಟ್ರಾಫಿಕ್ ನಲ್ಲಿ ಸಿಲುಕಿದವರನ್ನೂ ರಕ್ಷಿಸಿದ್ದಾರೆ.
ತನ್ನ ಕಣ್ಣೆದುರೇ ಹಾದು ಹೋಗುವ ಹೆದ್ದಾರಿಯಲ್ಲಿ ಟ್ರಾಫಿಕ್ ಬ್ಲಾಕ್ ಆಗಿದ್ದರೂ ಸ್ಪಂದಿಸದ ಪೋಲೀಸರು ಮೇಲಾಧಿಕಾರಿಗಳಿಂದ ಉಗಿಸಿಕೊಂಡ ಬಳಿಕ ಹಾಲ್ ಮಾಲಕ ಹಾಗೂ ಕಾರನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸಿದ ಕಾರು ಚಾಲಕರಿಗೆ ಕೇಸು ಹಾಕಲು ಆರಂಭಿಸಿದ್ದಾರೆ.
ಇಂಥಹುದೇ ಪರಿಸ್ಥಿತಿ ತೊಕ್ಕೋಟು ಬಳಿಯಿರುವ ಯುನಿಟಿ ಹಾಲ್ ಬಳಿಯೂ ಇದೆ. ಈ ಹಾಲ್ ನಲ್ಲಿ ಮದುವೆಯಾಗುವ ಮಂದಿ ಇಡೀ ಊರಿಗೆ ಆಮಂತ್ರಣ ನೀಡುವ ಕಾರಣ ಊರಿಡೀ ಇರುವ ವಾಹನಗಳು ಹೆದ್ದಾರಿಯ ಅಕ್ಕಪಕ್ಕದಲ್ಲೇ ಪಾರ್ಕ್ ಆಗುತ್ತಿದೆ.
ಒಂದೆಡೆ ಮಳೆಯಿಂದ, ಇನ್ನೊಂದೆಡೆ ಮದುವೆ ಹಾಲ್ ಗೆ ಬಂದವರ ಬೇಜಾವಬ್ದಾರಿಯಿಂದಾಗಿ ಹೆದ್ದಾರಿಯಲ್ಲಿ ಸಂಚರಿಸುವ ಪ್ರಯಾಣಿಕರು ಮಾತ್ರ ತಾಸುಗಟ್ಟಲೆ ಟ್ರಾಫಿಕ್ ಜಾಮ್ ನಲ್ಲಿ ಸಿಲುಕುವಂತಾಗಿದೆ.
ಹೆದ್ದಾರಿಯಲ್ಲಿ ಪ್ರಯಾಣಿಸುವ ಪ್ರತಿಯೊಬ್ಬನ ಹಿಡಿಶಾಪದಿಂದ ಮದುವೆಯಾಗುವ ಬದಲು, ತಮ್ಮ ಆಡಂಭರ ತೋರಿಸಲು ಈ ವ್ಯಕ್ತಿಗಳು ಯಾವುದಾದರೂ ನಿರ್ಜನ ಪ್ರದೇಶವನ್ನು ಆರಿಸಿಕೊಳ್ಳುವುದು ಸೂಕ್ತ.
ಅಲ್ಲಿ ತಾವು ಆಮಂತ್ರಣ ನೀಡಿದ ಬಾಂಧವರ ಜೊತೆಗೆ ಬೀದಿಯಲ್ಲಿ ಅಲೆದಾಡುವ ಪ್ರಾಣಿಗಳೂ ಮದುವೆಗೆ ಪಾಲ್ಗೊಳ್ಳುವಂತಾಗುತ್ತದೆ.