LATEST NEWS
ಕರಾವಳಿಯಲ್ಲಿ ಅಂತರ್ಜಲ ಗರಿಷ್ಠ ಕುಸಿತ – ಬಾವಿಗಳು ಖಾಲಿ ಖಾಲಿ

ಕರಾವಳಿಯಲ್ಲಿ ಅಂತರ್ಜಲ ಗರಿಷ್ಠ ಕುಸಿತ – ಬಾವಿಗಳು ಖಾಲಿ ಖಾಲಿ
ಮಂಗಳೂರು ಅಕ್ಟೋಬರ್ 29: ಅತ್ಯುತ್ತಮವಾದ ಮಳೆಗಾಲವನ್ನು ಈ ಬಾರಿ ಕಂಡಿದ್ದ ಕರಾವಳಿಯಲ್ಲಿ ಈಗ ಜಲಕ್ಷಾಮದ ಆತಂಕ ಎದುರಾಗಿದೆ. ಬೇಸಿಗೆ ಆರಂಭಕ್ಕೆ ಮುನ್ನವೇ ಕರಾವಳಿಯ ಜಿಲ್ಲೆಗಳಲ್ಲಿ ಬಾವಿಗಳಲ್ಲಿನ ನೀರಿನ ಮಟ್ಟ ದಿಢೀರ್ ಕುಸಿತ ಕಂಡಿದ್ದು,ಜನರ ಆತಂಕಕ್ಕೆ ಎದುರಾಗಿದೆ.
ಕರಾವಳಿಯ ಜಿಲ್ಲೆಗಳಾದ ಉಡುಪಿ ಹಾಗೂ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಮಾರ್ಚ್- ಏಪ್ರಿಲ್ ತಿಂಗಳಲ್ಲಿ ಬಾವಿ ನೀರು ತಳ ಸೇರುತ್ತಿತ್ತು. ಆದರೆ ಈ ವರ್ಷ ಬಾವಿಗಳಲ್ಲಿ ಫೆಬ್ರವರಿಯಲ್ಲಿ ಇರಬೇಕಾಗಿದ್ದ ನೀರಿನ ಮಟ್ಟ ಈಗಲೇ ಕಂಡುಬಂದಿದೆ. ಮಳೆಯಾಗದೆ ಮೇಲ್ಮಟ್ಟದ ಭೂಮಿಯ ಪದರದಲ್ಲಿ ನೀರ ಪಸೆ ಕೂಡ ಆರಿರುವುದರಿಂದ ತೋಟ, ಗದ್ದೆಗಳಿಗೆ ಬಾವಿಯಿಂದಲೇ ನೀರು ಹಾಯಿಸಲಾಗುತ್ತಿದ್ದು, ಅಂತರ್ಜಲ ಇನ್ನಷ್ಟು ಕುಸಿಯುತ್ತಿದೆ.

ಅಂತರ್ಜಲ ಇಲಾಖೆ ಮಾಹಿತಿ ಪ್ರಕಾರ, ಆಗಸ್ಟ್ ತಿಂಗಳಲ್ಲಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನೆಲಮಟ್ಟದಿಂದ ಕೆಳಗೆ ನೀರಿನ ಮಟ್ಟ 3 ಮೀಟರ್ ಆಸುಪಾಸಿನಲ್ಲಿದ್ದರೆ, ಸೆಪ್ಟೆಂಬರ್ ತಿಂಗಳಲ್ಲಿ 8.60 ಮೀ.ಗೆ ದಿಢೀರ್ ಕುಸಿದಿತ್ತು. ಅಕ್ಟೋಬರ್ ಮಧ್ಯಭಾಗದ ವೇಳೆಗೆ ಈ ಮಟ್ಟ 9.14 ಮೀ. ಆಳಕ್ಕೆ ತಲುಪಿದೆ.
ಈಗಾಗಲೇ ಪಶ್ಚಿಮ ಘಟ್ಟದ ಬಹುತೇಕ ಹಣ್ಣಿನ ಮರಗಳು ಅವಧಿಗೆ ಮೊದಲೇ ಹೂಬಿಟ್ಟು ಪ್ರಕೃತಿ ವೈಪರೀತ್ಯದ ಮುನ್ಸೂಚನೆ ನೀಡಿವೆ. ಇದೀಗ ಬಾವಿಗಳೂ ದಿಢೀರ್ ಬತ್ತುತ್ತಿದ್ದು, ಈ ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಕರಾವಳಿಯ ಜೀವವೈವಿಧ್ಯ ಅಪಾಯಕ್ಕೆ ಸಿಲುಕುವುದು ನಿಶ್ಚಿತ ಎನ್ನುತ್ತಾರೆ ಸ್ಥಳೀಯರು.
ಇದೇ ಪರಿಸ್ಥಿತಿ ಮುಂದುವರೆದರೆ ಈ ಬಾರಿ ಉಭಯ ಜಿಲ್ಲೆಗಳಲ್ಲಿ ನೀರಿಗೆ ಹಾಹಾಕಾರ ಉಂಟಾಗುವ ಪರಿಸ್ಥಿತಿ ಇದೆ. ಜಿಲ್ಲೆಯಲ್ಲಿ ಅತೀ ಹೆಚ್ಚು ಮಂದಿ ಬಾವಿ ನೀರನ್ನು ತಮ್ಮ ದೈನಂದಿನ ಕೆಲಸಗಳಿಗೆ ಉಪಯೋಗಿಸುವುದರಿಂದ ಅಂತರ್ಜಲದ ಕುಸಿತದಿಂದ ಸಮಸ್ಯೆಯಾಗಲಿದೆ ಎಂದು ಹೇಳಲಾಗಿದೆ.