KARNATAKA
ಇಲ್ಲಿದೆ ಸ್ವತಃ ಶ್ರೀರಾಮಚಂದ್ರ ಬಂದು ಪೂಜೆ ಸಲ್ಲಿಸಿದ ಆ ಪವಿತ್ರ ದೇವಾಲಯ..!
ಸೀತೆಯನ್ನು ಅಪಹರಿಸಿದ ರಾವಣನ ಮೇಲೆ ಯುದ್ದ ಸಾರಿದ ಶ್ರೀರಾಮ ರಾವಣನನ್ನು ಸೋಲಿಸಿ ಸೀತೆಯೊಂದಿಗೆ ವಾಪಸ್ ಬರುವಾಗ ಮಾರ್ಗ ಮಧ್ಯೆ ತಳಿಪರಂಬಿನ ಈ ರಾಜರಾಜೇಶ್ವರ ದೇವಸ್ಥಾನಕ್ಕೆ ಸೀತೆಯೋಮದಿಗೆ ಬಂದು ಪೂಜೆ ಸಲ್ಲಿಸಿದ್ದ.
ಕಾಸರಗೋಡು : ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಭಕ್ತರಿಗೆ ತೆರೆದುಕೊಳ್ಳಲು ಕ್ಷಣಗಣನೆ ಆರಂಭಗೊಂಡಿದೆ. ಶ್ರೀರಾಮನ ಮಂದಿರವನ್ನು ಕಣ್ತುಂಬಿಕೊಳ್ಳಲು ಭಕ್ತ ಸಾಗರವೇ ತುದಿಗಾಲಲ್ಲಿ ನಿಂತಿದೆ.
ಆದರೆ ಶ್ರೀರಾಮಚಂದ್ರನೇ ಸ್ವತಹ ಬಂದು ಪೂಜೆ ಸಲ್ಲಿಸಿದ ದೇವಾಲಯವೊಂದು ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ತಳಿಪರಂಬ ಎಂಬಲ್ಲಿದೆ. ಕೇರಳದ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಕಣ್ಣೂರು ಜಿಲ್ಲೆಯ ತಳಿಪರಂಬದಲ್ಲಿರುವ ಶ್ರೀ ರಾಜರಾಜೇಶ್ವರ ದೇವಸ್ಥಾನವೂ ಒಂದು. ಶಿವನು ಇಲ್ಲಿ ರಾಜನಾಗಿ ಪೂಜಿಸಲ್ಪಡುತ್ತಿರುವ ಕಾರಣಕ್ಕಾಗಿ ಈ ಕ್ಷೇತ್ರವನ್ನು ರಾಜರಾಜೇಶ್ವರ ಕ್ಷೇತ್ರವೆಂದು ಕರೆಯಲಾಗುತ್ತಿದೆ. ಬ್ರಹ್ಮ,ವಿಷ್ಣು,ಮಹೇಶ್ವರರು ಇಲ್ಲಿ ಒಟ್ಟಾಗಿ ನೆಲೆ ನಿಂತಿದ್ದಾರೆ ಅನ್ನೋದಕ್ಕೆ ಹಲವು ರೀತಿಯ ಐತಿಹ್ಯಗಳು ಇಲ್ಲಿ ಕಂಡು ಬರುತ್ತಿದೆ. ಹಿಂದೆ ತಳಿಪರಂಬ ಪ್ರದೇಶವನ್ನು ಶತುಶಮ ಮಹಾರಾಜ ಆಳುತ್ತಿದ್ದನಂತೆ. ಆತ ರಾಜ ಮಾತ್ರವಲ್ಲ ಓರ್ವ ಋಷಿಯಂತೆಯೂ ಇದ್ದು,ಒಂದು ಬಾರಿ ಶತ್ರು ರಾಜರು ಆತನ ರಾಜ್ಯದ ಮೇಲೆ ದಾಳಿ ಮಾಡಿ ಎಲ್ಲಾ ರಾಜ್ಯವನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದರಂತೆ. ಆ ಸಮಯದಲ್ಲಿ ಶತುಶಮ ಮಹಾರಾಜ ಹಿಮಾಲಯಕ್ಕೆ ತೆರಳಿ ದೇವರಿಗಾಗಿ ತಪಸ್ಸನ್ನು ಆಚರಿಸುತ್ತಾನೆ. ಶತುಶಮನ ತಪಸ್ಸಿಗೆ ಮೆಚ್ಚಿದ ಶಿವ ಆತನಿಗೆ ಹಾಗು ಆತನ ಜೊತೆಗೆ ಬಂದಿದ್ದ ಮುಜುಗುಂದಾ ಮತ್ತು ಮಂದಾತ ಎಂಬ ರಾಜರಿಗೂ ಮೂರು ಶಿವಲಿಂಗವನ್ನು ನೀಡುತ್ತಾರೆ.
ಶಿವನು ನೀಡಿದ ಶಿವಲಿಂಗವನ್ನು ಮೂವರೂ ತಲಿಪರಂಬುವಿಗೆ ತರುತ್ತಾರೆ. ಮೊದಲಿಗೆ ಮುಜುಗುಂದ ಶಿವಲಿಂಗವನ್ನು ಪ್ರತಿಷ್ಠಾಪಿಸಲು ಅದನ್ನು ನೆಲದಲ್ಲಿ ಇಡುತ್ತಾನೆ. ಆದರೆ ಆ ಶಿವಲಿಂಗ ನೇರವಾಗಿ ಭೂಮಿಯ ಅಡಿಗೆ ಹೋಗುತ್ತದೆ. ಅದರ ಬಳಿಕ ಮಂದಾತ ಕೂಡಾ ಶಿವಲಿಂಗವನ್ನು ಪ್ರತಿಷ್ಠಾಪಿಸಲು ಪ್ರಯತ್ನಿಸಿದಾಗ ಆ ಶಿವಲಿಂಗವೂ ನೇರವಾಗಿ ಭೂಮಿಯ ಒಳಗೆ ಸೇರುತ್ತದೆ. ಕೊನೆಗೆ ಶತುಶಮ ರಾಜನು ತನ್ನ ಬಳಿಯಿದ್ದ ಶಿವಲಿಂಗವನ್ನು ಪ್ರತಿಷ್ಠಾಪಿಸಲು ಸಿದ್ದತೆ ನಡೆಸುತ್ತಿದ್ದ ಸಂದರ್ಭದಲ್ಲಿ ಅಗಸ್ತ್ಯ ಮಹರ್ಷಿಗಳು ಶತುಶಮನಲ್ಲಿಗೆ ಬರುತ್ತಾರೆ. ಶಿವಲಿಂಗವನ್ನು ಪ್ರತಿಷ್ಠಾಪಿಸುವ ಮೊದಲು ತುಪ್ಪದ ದೀಪವನ್ನು ಹಚ್ಚಿ, ಹನ್ನೆರಡು ನಮಸ್ಕಾರ ಮಾಡುವಂತೆ ಶತುಶಮನಿಗೆ ಅಗಸ್ತ್ಯರು ಸೂಚಿಸುತ್ತಾರೆ. ಆ ಬಳಿಕ ಪ್ರತಿಷ್ಠಾಪಿಸಿದ ಶಿವಲಿಂಗ ಭೂಮಿಯ ಮೇಲೆ ಪ್ರತಿಷ್ಠಾಪಿತವಾಗುತ್ತದೆ. ರಾಜನಂತೆ ಪೂಜಿಸಲ್ಪಡುವ ಶಿವನ ಈ ಕ್ಷೇತ್ರದಲ್ಲಿ ಅಂದಿನಿಂದ ಇಂದಿನವರೆಗೂ ತುಪ್ಪದೀಪದ ಹರಕೆ ಅತ್ಯಂತ ಶ್ರೇಷ್ಠ ಹರಕೆಯಾಗಿ ಮೂಡಿಬಂದಿದೆ. ಯಾವಾಗ ಈ ಕ್ಷೇತ್ರದಲ್ಲಿ ಶಿವಲಿಂಗಕ್ಕೆ ತುಪ್ಪದ ಅಭಿಷೇಕ ನಿಲ್ಲುತ್ತದೋ, ಆ ಕ್ಷಣವೇ ಶಿವಲಿಂಗ ಭೂಮಿಯ ಒಳಗೆ ಸೇರಿಕೊಳ್ಳುತ್ತದೆ ಎನ್ನುವ ನಂಬಿಕೆ ಇಲ್ಲಿದೆ. ಆ ಕಾರಣಕ್ಕಾಗಿಯೇ ಇಲ್ಲಿ ಚಿನ್ನದ ಚೆಂಬಿನ ತುಪ್ಪಸೇವೆ, ಬೆಳ್ಳಿ ಚೆಂಬಿನ ತುಪ್ಪಸೇವೆ ಹರಕೆಯ ರೂಪದಲ್ಲಿ ನಡೆಯುತ್ತದೆ. ತಮ್ಮ ಅಭೀಷ್ಟ ನೆರವೇರಿಸಲು ಭಕ್ತರು ಇಲ್ಲಿ ಈ ಸೇವೆ ಮಾಡುವ ಹರಕೆ ಮಾಡಿಕೊಳ್ಳುತ್ತಾರೆ. ಅಭೀಷ್ಟ ನೆರವೇರಿದ ಬಳಿಕ ಕ್ಷೇತ್ರಕ್ಕೆ ಬಂದು ತಮ್ಮ ಹರಕೆ ಸೇವೆಯನ್ನು ನಡೆಸುತ್ತಾರೆ.
ಸ್ವತಹ ಶ್ರೀರಾಮಚಂದ್ರ ತಳಿಪರಂಬಿನ ಈ ರಾಜರಾಜೇಶ್ವರ ದೇವಸ್ಥಾನಕ್ಕೆ ಬಂದು ಪೂಜೆ ನೆರವೇರಿಸಿದ್ದಾನೆ ಎನ್ನುವ ಐತಿಹ್ಯವೂ ಇಲ್ಲಿದೆ. ಸೀತೆಯನ್ನು ಅಪಹರಿಸಿದ ರಾವಣನ ಮೇಲೆ ಯುದ್ದ ಸಾರಿದ ಶ್ರೀರಾಮ ರಾವಣನನ್ನು ಸೋಲಿಸಿ ಸೀತೆಯೊಂದಿಗೆ ವಾಪಸ್ ಬರುವಾಗ ಮಾರ್ಗ ಮಧ್ಯೆ ತಳಿಪರಂಬಿನ ಈ ರಾಜರಾಜೇಶ್ವರ ದೇವಸ್ಥಾನಕ್ಕೆ ಸೀತೆಯೋಮದಿಗೆ ಬಂದು ಪೂಜೆ ಸಲ್ಲಿಸಿದ್ದ ಎಂಬ ಐತಿಹ್ಯವಿದೆ. ಆದ್ದರಿಂದ ಈ ದೇವಳಕ್ಕೆ ಅತೀ ಹೆಚ್ಚಿನ ಮಹತ್ವವಿದೆ. ಕೇರಳಿಯರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕರ್ನಾಟಕದ ಭಕ್ತಾಧಿಗಳು ಇಲ್ಲಿಗೆ ಆಗಮಿಸಿ ಕೃತಾರ್ಥರಾಗುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈ ಕ್ಷೇತ್ರಕ್ಕೆ ನಿರಂತರವಾಗಿ ಭೇಟಿ ನೀಡುತ್ತಿದ್ದು, ಅವರು ನೀಡಿದ ಆನೆಯೂ ಕ್ಷೇತ್ರದಲ್ಲಿರುವುದು ವಿಶೇಷವಾಗಿದೆ.