LATEST NEWS
ಕೊರೊನಾ ವಿರುದ್ಧ ಹೋರಾಡಲು ಬಂದಿದೆ ಹರ್ಬಲ್ ಟೀ…!

ಮಂಗಳೂರು, ಜೂನ್ 13: ಇಡೀ ವಿಶ್ವವನ್ನು ಕಾಡುತ್ತಿರುವ ಕೊರೊನಾಗೆ ಇನ್ನೂ ವೈದ್ಯಲೋಕ ಔಷಧಿ ಕಂಡುಹಿಡಿದಿಲ್ಲ. ಈ ನಡುವೆ, ಭಾರತೀಯ ಪಾರಂಪರಿಕ ವೈದ್ಯ ಪದ್ಧತಿಯಿಂದ ಕೊರೊನಾ ಬರದಂತೆ ತಡೆಯಲು ಸಾಧ್ಯ ಎಂಬ ಜಾಗೃತಿ ಜನರಲ್ಲಿ ಮೂಡುತ್ತಿದೆ. ಕೊರೊನಾದಿಂದ ದೂರ ಇರಲು ಇಮ್ಯುನಿಟಿ ಹೆಚ್ಚಿಸಿಕೊಳ್ಳುವುದೇ ರಾಮ ಬಾಣ ಎನ್ನುವ ಮಾತು ವೈದ್ಯಲೋಕದಿಂದಲೇ ಕೇಳಿಬರುತ್ತಿದೆ. ಇದೇ ಹೊತ್ತಿಗೆ ಮಂಗಳೂರಿನಲ್ಲಿ ಆಯುರ್ವೇದಿಕ್ ಉತ್ಪನ್ನಗಳಿಂದಲೇ ಹೆಸರು ಮಾಡಿರುವ ಕಿಟ್ಸ್ ಫಾರ್ಮಸ್ಯುಟಿಕಲ್ ವರ್ಕ್ಸ್ ಸಂಸ್ಥೆಯವರು ಇಮ್ಯುನಿಟಿ ಹೆಚ್ಚಿಸುವ ಹರ್ಬಲ್ ಟೀ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.
ಶನಿವಾರ ಮಂಗಳೂರಿನಲ್ಲಿ ರಾಮಕೃಷ್ಣ ಮಠದ ಅಧ್ಯಕ್ಷ ಜಿತಕಾಮಾನಂದಜೀ ಹರ್ಬಲ್ ಟೀ ಉತ್ಪನ್ನದ ಪ್ಯಾಕೆಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು.

ತುಳಸಿ, ದಾಲ್ಚಿನ್ನಿ, ಅರಿಶಿನ, ಹಿಪ್ಪಲಿ, ಶುಂಠಿ, ಕರಿಮೆಣಸಿನ ಇತ್ಯಾದಿ ಆಯುರ್ವೇದಿಕ್ ಅಂಶಗಳಿಂದ ಕೂಡಿರುವ ಹರ್ಬಲ್ ಟೀ, ಆಯುಷ್ ಇಲಾಖೆಯಿಂದ ಪರವಾನಗಿ ಪಡೆದು ಹೊರಬಂದಿರುವ ಉತ್ಪನ್ನ. ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ 60 ದಿನಗಳ ಕಾಲ ಮಂಗಳೂರಿನ ಹರಿಹರ ಪಾಂಡುರಂಗ ಭಜನಾ ಮಂದಿರದ ಮೂಲಕ ಕೊರೊನಾ ವಾರಿಯರ್ಸ್ ಗಳಿಗಾಗಿ ಈ ಹರ್ಬಲ್ ಟೀಯನ್ನು ಉಚಿತವಾಗಿ ನೀಡಲಾಗಿತ್ತು. ಹರ್ಬಲ್ ಟೀಯನ್ನು 40 ದಿನಗಳಿಗಿಂತ ಹೆಚ್ಚು ಸೇವಿಸಿದ್ದ ಪೊಲೀಸ್ ಸಿಬ್ಬಂದಿ, ಆಶಾ ಕಾರ್ಯಕರ್ತರು ಸಂಸ್ಥೆಯ ಉತ್ಪನ್ನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಮಾಜದ ಹಲವು ಕಡೆಯಿಂದ ಬೇಡಿಕೆ ಹೆಚ್ಚಿದ್ದರಿಂದ ಹರ್ಬಲ್ ಟೀಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದೆ ಎಂದು ಸಂಸ್ಥೆಯ ಪ್ರವರ್ತಕ ನವೀನ್ ಪ್ರಭು ಹೇಳಿದರು.
ನಿಜಕ್ಕಾದರೆ ಇದು ಯಾವುದೇ ರೀತಿಯ ಚಹಾದ ಅಂಶಗಳನ್ನು ಹೊಂದಿಲ್ಲ. ಆದರೆ, ಚಹಾದ ಮಾದರಿಯಲ್ಲಿ ಈ ಕಷಾಯವನ್ನು ಹಾಲಿನ ಜೊತೆ ಬೆರೆಸಿ ಕುಡಿಯಬಹುದು. ಅಲ್ಲದೆ, ಬೆಲ್ಲದ ಜೊತೆ ಕುದಿಸಿ ಕುಡಿದರೆ ಇದರಿಂದ ದೇಹಕ್ಕೆ ಮತ್ತಷ್ಟು ಸತ್ವಗಳು ಸಿಗುತ್ತವೆ. ಹಾಲು ಬೆರೆಸದೆಯೂ ಇದನ್ನು ನೀರಿನಲ್ಲಿ ಕುದಿಸಿ ಕುಡಿದರೂ ಪರಿಣಾಮ ಏನೂ ಕಡಿಮೆಯಾಗಲ್ಲ. ಚಹಾ ಕುಡಿದಂತೆ ಪ್ರತಿದಿನ ಈ ಕಷಾಯವನ್ನು ಕುಡಿಯುವ ಅಭ್ಯಾಸ ಬೆಳೆಸಿಕೊಂಡರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಈಗಾಗಲೇ ಈ ಕಷಾಯ ಕುಡಿದವರು ದೈಹಿಕವಾಗಿ ಬೊಜ್ಜು ಕರಗಿಸಿಕೊಂಡು ಇಮ್ಯುನಿಟಿ ಹೆಚ್ಚಿಸಿಕೊಂಡವರು ನಮ್ಮಲ್ಲಿ ಬಹಳಷ್ಟು ಮಂದಿ ಇದ್ದಾರೆ ಎಂದು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದ ಆಯುರ್ವೇದ ತಜ್ಞ ಡಾ.ಉದಯಶಂಕರ್ ಹೇಳಿದರು.
ಮಂಗಳೂರಿನಲ್ಲಿ 60 ವರ್ಷಗಳಿಂದ ಆಯುರ್ವೇದ ಔಷಧೀಯ ಉತ್ಪನ್ನಗಳ ತಯಾರಿಯಲ್ಲಿ ತೊಡಗಿರುವ ಕಿಟ್ಸ್ ಫಾರ್ಮಸ್ಯುಟಿಕಲ್ ಸಂಸ್ಥೆಯು ಈಗಾಗಲೇ ಏಳು ಔಷಧ ತಯಾರಿಗೆ ಪೇಟೆಂಟ್ ಪಡೆದಿದೆ.
ಸುದ್ದಿಗೋಷ್ಟಿಯಲ್ಲಿ ಡಾ.ನಿಶಾಂತ್ ಪೈ, ಪಾಂಡುರಂಗ ಭಜನಾ ಮಂದಿರದ ಅಶ್ವಿತ್ ಉಪ್ಪಳ, ಮಾಜಿ ಕಾರ್ಪೋರೇಟರ್ ಚಂದ್ರಕಾಂತ, ಸಂಸ್ಥೆಯ ತಾಂತ್ರಿಕ ಸಿಬಂದಿ ಡಾ.ಮೋಹನ್ ಕಿಶೋರ್ ಉಪಸ್ಥಿತರಿದ್ದರು.