LATEST NEWS
ಸೋಂಕು ಭೀತಿ ಮಧ್ಯೆ ಉಳ್ಳಾಲ ಪೊಲೀಸರ ನೆರವಿಗೆ ಬಂದ ಮೂಡುಬಿದ್ರೆ ಇನ್ ಸ್ಪೆಕ್ಟರ್ !

ಮಂಗಳೂರು, ಜುಲೈ 2: ಉಳ್ಳಾಲ ಪೊಲೀಸರಿಗೆ ಕೊರೊನಾ ತಗುಲಿ ಆಸ್ಪತ್ರೆಗೆ ದಾಖಲಾಗಿದ್ದು , ಕೆಲವರನ್ನು ದಾಖಲು ಮಾಡುವಾಗ ವಿಳಂಬವಾಗಿದ್ದು , ಅದರಿಂದಾಗಿ ಪೊಲೀಸರು ನೋವು ಅನುಭವಿಸಿದ್ದು ಗೊತ್ತು. ಆದರೆ, ಅದೇ ದಿನ ಮೂಡುಬಿದ್ರೆಯ ಪೊಲೀಸ್ ಅಧಿಕಾರಿಯೊಬ್ಬರು ಉಳ್ಳಾಲ ಪೊಲೀಸರ ಸಹಾಯಕ್ಕೆ ಬಂದಿದ್ದು ಹೆಚ್ಚಿನ ಮಂದಿಗೆ ಗೊತ್ತಿಲ್ಲ.
ಹೌದು.. ಇತ್ತ ಉಳ್ಳಾಲ ಪೊಲೀಸರಲ್ಲಿ ಒಬ್ಬರಿಂದ ಒಬ್ಬರಿಗೆ ಕೊರೊನಾ ಪೀಡಿತರಾಗಿ ಆಸ್ಪತ್ರೆ ಸೇರುತ್ತಿದ್ದರೆ ಅವರ ಕುಟುಂಬಗಳು ಸಮಸ್ಯೆಗೆ ಸಿಲುಕಿದ್ದವು. ಈ ಸಂದರ್ಭದಲ್ಲಿ ಮೂಡುಬಿದ್ರೆ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ದಿನೇಶ್ ಕುಮಾರ್, ಸ್ವತಃ ಸಹಾಯಕ್ಕೆ ಧಾವಿಸಿದ್ದಾರೆ. ಪಿಕಪ್ ವಾಹನವನ್ನು ಬಾಡಿಗೆ ಮಾಡಿ, ದೀನಸಿ ಸಾಮಗ್ರಿಗಳನ್ನು ಹೊತ್ತುಕೊಂಡು ರಾತ್ರೋರಾತ್ರಿ ಉಳ್ಳಾಲಕ್ಕೆ ಬಂದಿದ್ದಾರೆ. ಜೂನ್ 29ರ ರಾತ್ರಿ ಉಳ್ಳಾಲದ ಪೊಲೀಸ್ ಕ್ವಾಟ್ರಸ್ ನಲ್ಲಿರುವ 30 ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ ಮಾಡಿದ್ದಾರೆ.

ಒಂದ್ಕಡೆ ವಿಭಾಗದ ಹಿರಿಯ ಅಧಿಕಾರಿಗಳು ಅಸಡ್ಡೆ ವಹಿಸಿದ್ದಾಗ ಉಳ್ಳಾಲ ಪೊಲೀಸರಿಗೆ ನೈತಿಕ ಸ್ಥೈರ್ಯ ತುಂಬಿದ ಇನ್ ಸ್ಪೆಕ್ಟರ್ ದಿನೇಶ್ ಕುಮಾರ್ ಅವರನ್ನು ಪೇದೆಗಳು ಕೊಂಡಾಡಿದ್ದಾರೆ. ಸಾಮಾನ್ಯವಾಗಿ ಕೊರೊನಾ ವಾರಿಯರ್ಸ್ ಆಗಿ ದುಡಿಯುವ ಪೊಲೀಸರ ಕಾರ್ಯವನ್ನು ಗುರುತಿಸುವುದು ಕಡಿಮೆ. ಏನೇ ಸಮಸ್ಯೆ ಆದ್ರೂ ಅವರು ದುಡಿಯಲೇಬೇಕು. ಇಂಥ ಸಂದರ್ಭದಲ್ಲಿ ಕಿರಿಯ ಪೊಲೀಸರ ಜೊತೆಗೆ ಹಿರಿಯಧಿಕಾರಿಗಳು ನಿಂತು ಧೈರ್ಯ ತುಂಬಬೇಕು. ಉಳ್ಳಾಲ ಪೊಲೀಸರ ವಿಚಾರದಲ್ಲಿ ಅಂಥ ಬೆಂಬಲ ಸಿಕ್ಕಿರಲಿಲ್ಲ. ಈಗ ಬೇರೆಯದ್ದೇ ಠಾಣೆಯ ಒಬ್ಬ ಅಧಿಕಾರಿ ತಮ್ಮ ಸಹಾಯಕ್ಕೆ ಬಂದಿದ್ದು ಅವರನ್ನೇ ಅಚ್ಚರಿಗೆ ಕೆಡವಿದೆ.