LATEST NEWS
ಹೆಜಮಾಡಿಯಲ್ಲಿ ಟೋಲ್ ದರ ಯಥಾಸ್ಥಿತಿ ಕಾಪಾಡಿ : ಉಸ್ತುವಾರಿ ಸಚಿವ ಎಸ್.ಅಂಗಾರ ಸೂಚನೆ
ಉಡುಪಿ, ಡಿಸೆಂಬರ್ 3 : ಜಿಲ್ಲೆಯ ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಈ ಹಿಂದೆ ಪಡೆಯುತ್ತಿರುವ ದರಗಳನ್ನು ಮಾತ್ರ ಪಡೆಯುವಂತೆ ಹಾಗೂ ಯಾವುದೇ ಕಾರಣಕ್ಕೂ ಸುರತ್ಕಲ್ ಟೋಲ್ ಪ್ಲಾಜಾ ವಿಲೀನದ ಪರಿಷ್ಕೃತ ದರಗಳನ್ನು ಪಡೆಯದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಅಂಗಾರ ಸೂಚನೆ ನೀಡಿದರು.
ಅವರು ಇಂದು ಉಡುಪಿ ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66 ರ ಸುರತ್ಕಲ್ ಟೋಲ್ ಪ್ಲಾಜಾವನ್ನು ತೆರವುಗೊಳಿಸಿ ಹೆಜಮಾಡಿ ಟೋಲ್ ಪ್ಲಾಜಾದಲ್ಲಿ ಟೋಲ್ ಸಂಗ್ರಹಣೆ ಮಾಡುವ ವಿಚಾರದ ಕುರಿತು ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆಯಲ್ಲಿ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು.
ಸುರತ್ಕಲ್ ಟೋಲ್ ಪ್ಲಾಜಾವನ್ನು ರದ್ದುಪಡಿಸಿ ಅದರ ದರಗಳನ್ನು ಹೆಜಮಾಡಿ ಟೋಲ್‌ನಲ್ಲಿ ವಿಲೀನಗೊಳಿಸಿ ಪರಿಷ್ಕೃತ ದರಗಳನ್ನು ಪಡೆಯುವ ಕುರಿತಂತೆ ಜಿಲ್ಲಾಡಳಿತದ ಮತ್ತು ಜನಪ್ರತಿನಿಧಿಗಳ ಯಾವುದೇ ಅಭಿಪ್ರಾಯಗಳನ್ನು ಕೇಳದೇ ಏಕಮುಖವಾಗಿ ನಿರ್ಧರಿಸಿರುವುದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು,
ಟೋಲ್ ದರ ಹೆಚ್ಚಳ ಕುರಿತಂತೆ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಿದ್ದು, ಅಲ್ಲಿಯವರೆಗೆ ಯಥಾಸ್ಥಿತಿಯಲ್ಲಿ ಹಿಂದಿನ ದರದಲ್ಲಿಯೇ ವಾಹನಗಳಿಂದ ಶುಲ್ಕವನ್ನು ಪಡೆಯುವಂತೆ ಸೂಚನೆ ನೀಡಿದರು. ಉಡುಪಿ ಜಿಲ್ಲೆಯ ವಾಹನಗಳಿಗೆ ಹಿಂದಿನಂತೆಯೇ ನಿಗಧಿತ ದರಗಳನ್ನು ಪಡೆಯುವಂತೆ, ಪ್ರತ್ಯೇಕ ಲೇನ್ ವ್ಯವಸ್ಥೆ ಮಾಡುವಂತೆ ಹಾಗೂ ಸುರತ್ಕಲ್‌ನಲ್ಲಿ ಸ್ಥಳೀಯ ವಾಹನಗಳಿಗೆ ನೀಡುತ್ತಿದ್ದ ರಿಯಾಯಿತಿಗಳನ್ನು ಉಡುಪಿ ಜಿಲ್ಲೆಯ ವಾಹನಗಳಿಗೆ ನೀಡುವಂತೆ ಸಚಿವ ಸುನೀಲ್ ಕುಮಾರ್ ಹಾಗೂ ಶಾಸಕ ರಘುಪತಿ ಭಟ್ ತಿಳಿಸಿದರು.