LATEST NEWS
ಮಳೆಯಿಂದ ತತ್ತರಿಸಿದ ಪಾಕಿಸ್ತಾನದಲ್ಲಿ 37 ಮಂದಿ ಮೃತ್ಯು…! ಜನ ಜೀವನ ಅಸ್ತವ್ಯಸ್ತ
ಪೇಶಾವರ: ಪಾಕಿಸ್ತಾನ ದಲ್ಲಿ ಹಿಮಗಟ್ಟುವ ಚಳಿಗಾಲದ ಮಧ್ಯೆ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು,ಕನಿಷ್ಠ 37 ಮಂದಿ ಮೃತಪಟ್ಟಿದ್ದಾರೆ.
ಇನ್ನು ಮಳೆಯಿಂದ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹಲವು ಕಡೆ, ಅದರಲ್ಲೂ ಮುಖ್ಯವಾಗಿ ವಾಯವ್ಯ ಪಾಕಿಸ್ತಾನದಲ್ಲಿ ಮನೆಗಳು ಕುಸಿದು ಬಿದ್ದಿದ್ದು, ಭೂಕುಸಿತದಿಂದಾಗಿ ರಸ್ತೆಗಳು ಮುಚ್ಚಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಫ್ಘಾನಿಸ್ತಾನದ ಗಡಿಗೆ ಹೊಂದಿಕೊಂಡಿರುವ ಖ್ಯಾಬರ್ ಜಿಲ್ಲೆಯ ಸ್ವಾತ್ ಕಣಿವೆ ಪ್ರದೇಶದಲ್ಲಿ ಮಳೆಸಂಬಂಧಿ ಅನಾಹುತಗಳಲ್ಲಿ 30 ಮಂದಿ ಮೃತಪಟ್ಟಿದ್ದು, ಇವರಲ್ಲಿ ಬಹುತೇಕ ಮಂದಿ ಮಹಿಳೆಯರು ಮತ್ತು ಮಕ್ಕಳು ಎಂದು ಪ್ರಾಂತೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿದೆ.
ವಾಯವ್ಯ ಬಲೂಚಿಸ್ತಾನ ಪ್ರದೇಶದಲ್ಲಿ ಕರಾವಳಿ ಭಾಗದ ಗ್ವಾದರ್ ಪಟ್ಟಣದಲ್ಲಿ ಪ್ರವಾಹದಿಂದಾಗಿ ಕನಿಷ್ಠ ಐದು ಮಂದಿ ಜೀವ ಕಳೆದುಕೊಂಡಿದ್ದಾರೆ. ಪ್ರವಾಹಪೀಡಿತ ಪ್ರದೇಶಗಳಲ್ಲಿ ಸಿಕ್ಕಿಹಾಕಿಕೊಂಡಿರುವ ನಾಗರಿಕರನ್ನು ದೋಣಿಗಳ ಸಹಾಯದಿಂದ ರಕ್ಷಿಸುವ ಕಾರ್ಯ ಮುಂದುವರಿದಿದೆ. ಮಳೆಯಿಂದಾಗಿ 700 ಮನೆಗಳಿಗೆ ಹಾನಿಯಾಗಿದೆ ಎಂದು ಬಲೂಚಿಸ್ತಾನ ಮುಖ್ಯಮಂತ್ರಿ ಸರ್ಫರಾಝ್ ಬುಲ್ಟಿ ಹೇಳಿದ್ದಾರೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಕೂಡಾ ಸಾವುನೋವು ಹಾಗೂ ಹಾನಿಗಳು ಸಂಭವಿಸಿವೆ. ಪರಿಹಾರ ಕಾರ್ಯಾಚರಣೆ ಅಂಗವಾಗಿ ಅಧಿಕಾರಿಗಳು ತುರ್ತು ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದ್ದು, ಹೆದ್ದಾರಿಗಳು ಮುಚ್ಚಲು ಕಾರಣವಾದ ಭೂಕುಸಿತದ ಅವಶೇಷಗಳನ್ನು ತೆರವುಗೊಳಿಸಲು ದೊಡ್ಡ ಯಂತ್ರಗಳನ್ನೂ ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ವಿಪತ್ತು ನಿರ್ವಹಣಾ ಪ್ರಾಧಿಕಾರ ವಿವರಿಸಿದೆ.