LATEST NEWS
ಪಶ್ಚಿಮ ಕರಾವಳಿಯಲ್ಲಿ ಭಾರಿ ಗಾಳಿ ಮಳೆ- ಪ್ರವಾಹ ಭೀತಿ: ಹವಾಮಾನ ಇಲಾಖೆ ಎಚ್ಚರಿಕೆ
ಹೊಸದಿಲ್ಲಿ, ಆಗಸ್ಟ್ 08: ಕೇಂದ್ರ ಭಾರತ ಮತ್ತು ಪಶ್ಚಿಮ ಕರಾವಳಿ ಪ್ರದೇಶದಲ್ಲಿ ಮುಂದಿನ 3-4 ದಿನಗಳವರೆಗೆ 200 ಮಿಲಿಮೀಟರ್ ಮಳೆಯಾಗುವ ಸಾಧ್ಯತೆಯಿದ್ದು, ಹಲವು ಕಡೆಗಳಲ್ಲಿ ಪ್ರವಾಹ ಭೀತಿ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.
ಶನಿವಾರ ಸಂಜೆ ವಾಯವ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಸಂಭವಿಸಿದ್ದು, ಇದು ವಾಯವ್ಯ ಮುಖವಾಗಿ ಒಡಿಶಾ ಹಾಗೂ ಛತ್ತೀಸ್‍ಗಢದತ್ತ ಬಲವಾದ ಗಾಳಿ ಬೀಸುವ ನಿರೀಕ್ಷೆ ಇದೆ ಎಂದು ಹೇಳಿದೆ. ಇದರಿಂದಾಗಿ ಮುಂದಿನ 4-5 ದಿನಗಳ ಕಾಲ ವ್ಯಾಪಕ ಮಳೆಯಾಗುವ ನಿರೀಕ್ಷೆ ಇದೆ ಎಂದು ಹೇಳಿದೆ.
ಜೊತೆಗೆ ಕರ್ನಾಟಕ ರಾಜ್ಯದಲ್ಲೂ ಭಾರಿ ಮಳೆ ಮತ್ತು ಗಾಳಿಯಬ ಬಗ್ಗೆ ಕೂಡ ಹವಮಾನ ಇಲಾಖೆ ಎಚ್ಚರಿಕೆ ನೀಡಿದ್ದು ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಗಂಟೆಗೆ 65 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದ್ದು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಸಿದೆ.
ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳದಲ್ಲೂ ವ್ಯಾಪಕ ಮಳೆಯಾಗಲಿದ್ದು, ಚಂಡಮಾರುತ ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಗುಜರಾತ್ ಮೂಲಕ ಹಾದುಹೋಗುವ ನಿರೀಕ್ಷೆ ಇದೆ ಎಂದು ಹೇಳಿದೆ.