LATEST NEWS
ದಕ್ಷಿಣಕನ್ನಡದಲ್ಲಿ ಭಾರೀ ಮಳೆ ಹೆಚ್ಚಿನ ಸೇತುವೆಗಳು ಜಲಾವೃತ ಸಂಪರ್ಕ ಕಳೆದುಕೊಳ್ಳುವ ಭೀತಿ
ದಕ್ಷಿಣಕನ್ನಡದಲ್ಲಿ ಭಾರೀ ಮಳೆ ಹೆಚ್ಚಿನ ಸೇತುವೆಗಳು ಜಲಾವೃತ ಸಂಪರ್ಕ ಕಳೆದುಕೊಳ್ಳುವ ಭೀತಿ
ಮಂಗಳೂರು ಆಗಸ್ಟ್ 14: ಕರಾವಳಿ ಸೇರಿದಂತೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜಿಲ್ಲೆಯ ಎಲ್ಲಾ ನದಿಗಳು ಉಕ್ಕಿಹರಿಯುತ್ತಿದ್ದು ಹೆಚ್ಚಿನ ಭಾಗದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಜಿಲ್ಲೆಯ ಎಲ್ಲಾ ಸೇತುವೆಗಳು ಜಲಾವೃತಗೊಂಡಿದ್ದು, ಸಂಪರ್ಕ ಕಳೆದುಕೊಳ್ಳುವ ಭೀತಿಯಲ್ಲಿ ಜನರಿದ್ದಾರೆ.
ಕರಾವಳಿ ಹಾಗು ಪಶ್ಚಿ ಘಟ್ಟ ದ ತಪ್ಪುಲು ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತ್ರಿಶಂಕು ಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯಿಂದ ಹೊರ ಹೋಗುವ ಮೂರು ರಾಷ್ಟ್ರೀಯ ಹೆದ್ದಾರಿ ಭಾರೀ ಮಳೆಯಿಂದಾಗಿ ಬಂದ್ ಆಗಿವೆ. ಚಾರ್ಮಾಡಿ, ಮಾಣಿ-ಮೈಸೂರು,ಶಿರಾಡಿ ಘಾಟ್ ಹೆದ್ದಾರಿ ಬಂದ್ ಆಗಿವೆ.
ಕರಾವಳಿಯಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ಇಂದು ಮಂಗಳೂರಿನಿಂದ ಬೆಂಗಳೂರು ಕಡೆ ಸಂಚರಿಸುವ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಿದ್ದು, ಕೆಲವು ರೈಲುಗಳನ್ನು ರದ್ದು ಪಡಿಸಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.
ಕರಾವಳಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ಮಂಗಳೂರು ಬೆಂಗಳೂರು ನಡುವೆ ಸಂಚರಿಸಲು ಇರುವ ಬಹುತೇಕ ಎಲ್ಲಾ ಸಂಪರ್ಕ ರಸ್ತೆಗಳು ಬಂದ್ ಆಗಿದ್ದು, ಈ ನಡುವೆ ಇಂದು ಮಂಗಳೂರು – ಬೆಂಗಳೂರು ರೈಲು ಸಂಚಾರ ಕೂಡ ರದ್ದಾಗಿದ್ದು, ಮಳೆಯಿಂದಾಗಿ ಮಂಗಳೂರು ಮತ್ತು ಬೆಂಗಳೂರಿನ ನಡುವೆ ವಾಹನ ಸಂಚಾರ ದುಸ್ತರವಾಗಿದೆ.
ಸುಬ್ರಹ್ಮಣ್ಯ ಮತ್ತು ಸಕಲೇಶಪುರ ಘಾಟ್ ನಡುವಿನ ರೈಲ್ವೆ ಮಾರ್ಗದಲ್ಲಿ ಗುಡ್ಡ ಕುಸಿತ ಉಂಟಾಗಿರುವ ಹಿನ್ನಲೆಯಲ್ಲಿ ಇಂದು ಮಂಗಳೂರಿನಿಂದ ಬೆಂಗಳೂರಿಗೆ ಹೊರಡುವ ಎಲ್ಲಾ ರೈಲುಗಳು ರದ್ದಾಗಿದೆ. ಹಾಗೆಯೇ ಬೆಂಗಳೂರಿನಿಂದ ಮಂಗಳೂರಿಗೆ ಹೊರಡಬೇಕಾಗಿದ್ದ ಎಲ್ಲಾ ರೈಲು ಇಂದು ರದ್ದಾಗಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.
ಚಾರ್ಮಾಡಿ ಘಾಟ್ ನಲ್ಲಿ ಗುಡ್ಡ ಕುಸಿದ ಕಾರಣ ರಸ್ತೆ ಸಂಚಾರಕ್ಕೆ ತೊಡಕುಂಟಾಗಿದೆ. ಮಾಣಿ-ಮೈಸೂರು ಹೆದ್ದಾರಿ, ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದ್ದು
ಬೆಂಗಳೂರು – ಮಂಗಳೂರು ರಸ್ತೆ ಸಂಪರ್ಕ ಕಡಿತಗೊಂಡಿದೆ. ರಸ್ತೆ ಮೇಲೆ ನದಿಯ ಪ್ರವಾಹ ನೀರು ಹರಿಯುತ್ತಿದ್ದು ಹೆಚ್ಚಿನ ಸೇತುವೆಗಳ ಮೇಲೆ ವಾಹನ ಸಂಚಾರ ಸ್ಥಗಿತ ಗೊಳಿಸಲಾಗಿದೆ. ನೀರಿನ ಹರಿವು ಕಡಿಮೆಯಾದ ಬಳಿಕ ಮತ್ತೇ ವಾಹನ ಸಂಚಾರ ಆರಂಭವಾಗಲಿದೆ. ಈ ಪರಿಣಾಮ ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಹಾಗು ಬೆಂಗಳೂರಿನಿಂದ ಮಂಗಳೂರು ಕಡೆಗೆ ಬರುವ ವಾಹನಗಳು ನಡು ರಸ್ತೆಯಲ್ಲೇ ಸಾಲುಗಟ್ಟಿ ನಿಂತಿವೆ.