LATEST NEWS
ಮಹಾಮಳೆಗೆ ಮುಳುಗಿದ ಮುಂಬೈ- ಇಂದು ಮತ್ತು ನಾಳೆ ರೆಡ್ ಅಲರ್ಟ್
ಮುಂಬೈ: ಮುಂಬೈ ಮಹಾನಗರ ಪ್ರದೇಶ ಮತ್ತು ಮಹಾರಾಷ್ಟ್ರದ ಕೊಂಕಣ ಕರಾವಳಿ ಪ್ರದೇಶಗಳಲ್ಲಿ ರಾತ್ರಿಯಿಂದ ಎಡಬಿಡದೇ ಸುರಿಯುತ್ತಿದ್ದು, ಮಹಾ ಮಳೆಗೆ ಮಹಾನಗರಿ ಮುಂಬೈ ತತ್ತರಿಸಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹವಾಮಾನ ಇಲಾಖೆ ಆಗಸ್ಟ್ 4 ಮತ್ತು 5 ದಿನ ರೆಡ್ ಅಲರ್ಟ್ ಘೋಷಣೆ ಮಾಡಿದ್ದು, ಭಾರೀ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಿದೆ. ಸೋಮವಾರ ಮಧ್ಯರಾತ್ರಿಯಿಂದ ಮಂಗಳವಾರ ಬೆಳಗ್ಗೆವರೆಗೆ 200 ಮಿಮೀ ಮಳೆಯಾಗಿದೆ. ಹವಾಮಾನ ಇಲಾಖೆಯ ಪ್ರಕಾರ ಬುಧವಾರ ಮತ್ತು ಗುರುವಾರ ಇದೇ ರೀತಿ ಮಳೆ ಮುಂದುವರಿಯಲಿದೆ.
ಮಹಾನಗರ ಪಾಲಿಕೆ, ಎನ್‍ಡಿಆರ್‍ಎಫ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗೆ ಅಲರ್ಟ್ ಆಗಿರುವಂತೆ ಸರ್ಕಾರ ಸೂಚಿಸಿದೆ. ಮಂಗಳವಾರ ಬೆಳಗಿನ ಜಾವ ಮೂರು ಗಂಟೆಗೆ ಮುಂಬೈ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಮಳೆ ಆರಂಭಗೊಂಡಿದೆ. ಮುಂಬೈನ ಕೆಲ ಪ್ರದೇಶಗಳಲ್ಲಿ ಮಿಂಚು ಮತ್ತು ಗುಡುಗು ಸಹಿತ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.
ಗೋರೇಗಾಂವ್, ಕಿಂಗ್ ಸರ್ಕಲ್. ಹಿಂದ್‍ಮಾತಾ, ದಾದರ್, ಶಿವಾಜಿ ಚೌಕ, ಶೆಲ್ ಕಾಲೋನಿ, ಕುರ್ಲಾ ಎಸ್‍ಟಿ ಡಿಪೋ, ಬಾಂದ್ರಾ ಟಾಕೀಸ್ ಮತ್ತು ಸೈನ್ ರೋಡ್ ಪ್ರದೇಶಗಳು ಜಲಾವೃತಗೊಂಡಿವೆ. ಸಮುದ್ರದಲ್ಲಿ 4.5 ಮೀಟರ್ ಎತ್ತರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು, ಬೀಚ್ ಗೆ ಸಾರ್ವಜನಿರಕ ಪ್ರವೇಶ ನಿಷೇಧಿಸಲಾಗಿದೆ.
ಮುಂಬೈ ಮಹಾನಗರ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಮುಂಬೈ ನಗರ ಮತ್ತು ಮುಂಬೈ ಸಬ್‌ಅರ್ಬನ್ ಅವಳಿ ಜಿಲ್ಲೆಗಳಿಗೆ ಮಹಾರಾಷ್ಟ್ರ ಸರ್ಕಾರ ಸಾರ್ವಜನಿಕ ರಜೆ ಘೋಷಿಸಿದೆ. ಅದೇ ವೇಳೆ ಜನರು ಮನೆಯಿಂದ ಹೊರಗೆ ಬರಬೇಡಿ ಎಂದು ಸೂಚಿಸಿದೆ. ಮುಂಬೈಯ ಕಾಂಡಿವಿಲಿಯ ಪಶ್ಚಿಮ ಎಕ್ಸ್‌ಪ್ರೆಸ್ ಹೆದ್ದಾರಿ ಭಾಗದಲ್ಲಿ ಮಣ್ಣು ಕುಸಿದಿದ್ದು ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ. ಪೂರ್ವ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ವಾಹನ ಸಂಚಾರ ದಟ್ಟಣೆ ಕಂಡು ಬಂದಿದೆ.
https://youtu.be/qdh8JkBnsdE