LATEST NEWS
ಕರಾವಳಿಯಲ್ಲಿ ಎಡೆಬಿಡದೇ ಸುರಿಯುತ್ತಿರುವ ಭಾರೀ ಮಳೆ…
ಮಂಗಳೂರು ಜುಲೈ 17: ಕರಾವಳಿಯಾದ್ಯಂತ ಇಂದು ಕೂಡಾ ಭಾರೀ ಮಳೆ ಮುಂದುವರಿದಿದೆ. ಕಳೆದ ಎರಡು ದಿನಗಳಿಂದ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜಿಲ್ಲೆಯ ತಗ್ಗು ಪ್ರದೇಶಗಳು ಮುಳಗಡೆಯಾಗುವ ಆತಂಕವೂ ಎದುರಾಗಿದೆ.
ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಕೊಂಚ ಮಟ್ಟಿಗೆ ತಗ್ಗಿರುವ ಪರಿಣಾಮ ನೇತ್ರಾವತಿ ಹಾಗೂ ಕುಮಾರಧಾರಾ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದರೂ, ಅಪಾಯದ ಮಟ್ಟಕ್ಕೆ ತಲುಪಿಲ್ಲ.
ಸುಬ್ರಹ್ಮಣ್ಯ, ಪುತ್ತೂರು, ಬೆಳ್ತಂಗಡಿ ಹಾಗೂ ಸುಳ್ಯ ಭಾಗದ ಹಲವೆಡೆ ಭಾರೀ ಮಳೆ ಮುಂದುವರಿದಿದೆ. ಒಂದೆಡೆ ಕೊರೊನಾ ಲಾಕ್ ಡೌನ್ ,ಇನ್ನೊಂದೆಡೆ ಭಾರೀ ಮಳೆಯ ಕಾರಣ ಜನ ಮನೆಯಿಂದ ಹೊರಬರಲು ಉದಾಸೀನತೆಯನ್ನೂ ತೋರಿದ್ದಾರೆ. ಇದರಿಂದಾಗಿ ಪುತ್ತೂರು ಪೇಟೆ ಸೇರಿದಂತೆ ಹಲವು ಕಡೆಗಳಲ್ಲಿ ಅಗತ್ಯ ವಸ್ತುಗಳ ಅಂಗಡಿಗಳು ತೆರೆದಿದ್ದರೂ, ಇಂದು ಕೂಡಾ ಜನ ಮಾತ್ರ ಮಾರುಕಟ್ಟೆಗಳ ಕಡೆಗೆ ಬರದ ಹಿನ್ನಲೆಯಲ್ಲಿ ಮಾರುಕಟ್ಟೆಗಳು ಜನರಿಲ್ಲದೆ ಭೀಕೋ ಎನ್ನುತ್ತಿದೆ.
ಭಾರೀ ಮಳೆ ಹಿನ್ನಲೆಯಲ್ಲಿ ಪುತ್ತೂರು- ಪಾಣಾಜೆ ಸಂಪರ್ಕಿಸುವ ರಸ್ತೆಯ ಚೇಳ್ಯಡ್ಕ ಎಂಬಲ್ಲಿ ನಿರ್ಮಾಣಗೊಂಡಿರುವ ಸೇತುವೆ ಮುಳುಗಡೆಗೊಂಡಿದೆ. ಇದರಿಂದಾಗಿ ಬೆಟ್ಟಂಪಾಡಿ,ಚೇಳ್ಯಡ್ಕ ಹಾಗೂ ಇರ್ದೆ ಮೊದಲಾದ ಭಾಗಗಳ ಸಾರ್ವಜನಿಕರಿಗೆ ಸಂಪರ್ಕಕ್ಕೆ ತೊಂದರೆಯಾಗಿದೆ. ಲಾಕ್ ಡೌನ್ ಜಾರಿಯಲ್ಲಿರುವ ಕಾರಣ ವಾಹನ ಸಂಚಾರ ವಿರಳವಾಗಿರುವ ಕಾರಣ ಸೇತುವೆ ಮುಳುಗಡೆಯಾಗಿರುವುದರಿಂದ ಹೆಚ್ಚಿನ ಸಮಸ್ಯೆಯಾಗಿಲ್ಲ. ಮಳೆಗೆ ಜಿಲ್ಲೆಯ ಹಲವೆಡೆ ಮರಗಳು ಉರುಳಿದ್ದು , ಯಾವುದೇ ಜೀವ ಹಾನಿಯಾಗಿಲ್ಲ.
ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟದಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಮಳೆ ಇದೇ ರೀತಿ ಮುಂದುವರಿದಲ್ಲಿ ಸ್ನಾನಘಟ್ಟ ಮುಳುಗಡೆಯಾಗುವ ಸಾಧ್ಯತೆಯೂ ಇದೆ. ಜಿಲ್ಲೆಯಾದ್ಯಂತ ಇನ್ನೂ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಜಿಲ್ಲೆಯಾದ್ಯಂತ ಕಾರ್ಮೋಡ ಕವಿದ ವಾತಾವರಣ ಮುಂದುವರಿದೆ.
ಶನಿವಾರ ಮುಂಜಾನೆಯ ವರೆಗಿನ 48 ತಾಸುಗಳ ಅವಧಿಯಲ್ಲಿ ಕರಾವಳಿಯ ಬಹುತೇಕ ಎಲ್ಲೆಡೆ, ದಕ್ಷಿಣ ಒಳನಾಡಿನ ಹಲವೆಡೆ ಮತ್ತು ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ. ಕರಾವಳಿಯಲ್ಲಿ ಜುಲೈ 17 ಮತ್ತು 18ರಂದು ಎಲ್ಲೊ, ಜುಲೈ 19 ಮತ್ತು 20ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಸಮುದ್ರ ಪ್ರಕ್ಷುಬ್ಧವಿರಲಿದ್ದು, ಮೀನುಗಾರರು ಸಮುದ್ರಕ್ಕಿಳಿಯಬಾರದು ಎಂದು ಎಚ್ಚರಿಸಿದೆ.