DAKSHINA KANNADA
ಕೊಡಗಿನಲ್ಲಿ ಭಾರಿ ಮಳೆ ಅಬ್ಬರ; ಕರಿಕೆ ರಸ್ತೆ, ಸಂಪಾಜೆಯ ಕಲ್ಲಾಳದಲ್ಲಿ ಭೂಕುಸಿತ
ಕೊಡಗು, ಆಗಸ್ಟ್ 05: ಜಿಲ್ಲೆಯಲ್ಲಿ ಎರಡು ದಿನಗಳಿಂದ ಮಳೆಯ ಅಬ್ಬರ ಮತ್ತೆ ಜೋರಾಗಿದೆ. ಆಗಸ್ಟ್ 1ರಿಂದಲೂ ಕೊಡಗು ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು , ಹಲವೆಡೆ ಅಪಘಡಗಳು ಸಂಭವಿಸಿವೆ. ಮಡಿಕೇರಿ ತಾಲ್ಲೂಕಿನ ಭಾಗಮಂಡಲ, ಕರಿಕೆ ರಸ್ತೆಯಲ್ಲಿ ಹಾಗೂ ಸಂಪಾಜೆ ಸಮೀಪದ ಕಲ್ಲಾಳ ಭೂಕುಸಿತವಾಗಿದೆ.
ಭಾರೀ ಮಳೆಗೆ ಚೆಟ್ಟಿಮಾನಿ, ಮರ್ಪಡ್ಕ ಗ್ರಾಮಗಳ ಸೇತುವೆಗಳು ಕೊಚ್ಚಿ ಹೋಗಿವೆ. ಮಡಿಕೇರಿ ತಾಲೂಕಿನ ಸಂಪಾಜೆ, ಚೆಂಬು, ಕರಿಕೆ, ಕೊಯನಾಡು ಭಾಗದಲ್ಲಿ ವ್ಯಾಪಕ ಮಳೆಯಿಂದಾಗಿ ಅಲ್ಲಲ್ಲಿ ಮೂಲ ಸೌಕರ್ಯಕ್ಕೆ ಹಾನಿಯಾಗಿದೆ. ಚೆಂಬು, ಗೂನಡ್ಕ ದಬ್ಬಡ್ಕ ಈ ಭಾಗದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಅಲ್ಲಿಯ ಹೊಳೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ರಭಸವಾಗಿ ಹರಿಯುತ್ತಿರುವ ನೀರಿಗೆ ಕಲ್ಲುಗುಂಡಿ, ಚೆಟ್ಟಿಮಾನಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕೊಚ್ಚಿ ಹೋಗಿದೆ. ಸೇತುವೆಯ ಎರಡು ಭಾಗಗಳಲ್ಲಿನ ಮಣ್ಣು ಸಂಪೂರ್ಣ ಕೊಚ್ಚಿ ಹೋಗಿರುವುದರಿಂದ ಚೆಟ್ಟಿಮಾನಿಯ 60 ಕುಟುಂಬಗಳ ಜನರು ಸುಮಾರು 13 ಕಿಲೋ ಮೀಟರ್ ನಡೆದುಕೊಂಡು ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸೇತುವೆ ಬಹುತೇಕ ಕೊಚ್ಚಿ ಹೋಗಿರುವುದರಿಂದ ಸೇತುವೆಯಿಂದ ಆಚೆಗೆ ಇರುವ ವಾಹನಗಳು ಅತ್ತಕಡೆಯೇ ಇದ್ದರೆ, ಸೇತುವೆಯಿಂದ ಈಚೆಗೆ ಇರುವ ವಾಹನಗಳು ಈಚೆಯೇ ಉಳಿಯುವಂತಾಗಿದೆ.
ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಚೆಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರ್ಪಡ್ಕ ಸೇತುವೆ ಸಂಪೂರ್ಣ ಕೊಚ್ಚಿ ಹೋಗಿದೆ. ಇದರಿಂದಾಗಿ ವಾಹನಗಳ ಸಂಚಾರ ಸಂಪೂರ್ಣ ಬಂದ್ ಆಗಿದೆ. ಭಾಗಮಂಡಲ ಕರಿಕೆ ನಡುವಿನ ರಾಜ್ಯ ಹೆದ್ದಾರಿಯಲ್ಲಿ ಭೂಕುಸಿತವಾಗಿದೆ. ಭಾಗಮಂಡಲದಿಂದ 10 ಕಿಲೋ ಮೀಟರ್ ದೂರದಲ್ಲಿ ಭೂಕುಸಿವಾಗಿದ್ದು ಗುರುವಾರ ಇಡೀ ದಿನ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಬೆಟ್ಟದ ಮೇಲ್ಭಾಗದಲ್ಲಿ ಭಾರೀ ಭೂಕುಸಿತವಾಗಿದ್ದು, ಬೃಹತ್ ಗಾತ್ರದ ಬಂಡೆ, ಮರಗಳು ರಸ್ತೆಗೆ ಉರುಳಿದ್ದವು.
ಇನ್ನು ಜಿಲ್ಲೆಯಲ್ಲಿ ಶುಕ್ರವಾರ ಬೆಳಿಗ್ಗೆ 8.30 ರವರೆಗೆ 115.6 ಮಿಲಿ ಮೀಟರ್ ನಿಂದ 204 ಮಿಲಿ ಮೀಟರ್ ಮಳೆಯಾಗುವ ಸಾಧ್ಯತೆ ಇರುವುದರಿಂದ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ವ್ಯಾಪಕ ಮಳೆ ಆಗುತ್ತಿರುವುದರಿಂದ ಜಿಲ್ಲೆಯ ಜನಜೀವನ ಅಸ್ತವ್ಯಸ್ತವಾಗಿದೆ.