DAKSHINA KANNADA
ಕರ್ನಾಟಕದಲ್ಲಿ ಮುಂದಿನ ವಾರದಲ್ಲಿ ಭರ್ಜರಿ ಮಳೆ, ಇದು ಹವಾಮಾನ ಇಲಾಖೆ ಗ್ಯಾರಂಟಿ..!

ಬೆಂಗಳೂರು : ಕರ್ನಾಟಕ ರಾಜ್ಯದಲ್ಲಿ ಮುಂದಿನ ವಾರದಿಂದ ಭರ್ಜರಿ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಗ್ಯಾರಂಟಿ ಕೊಟ್ಟಿದ್ದು ಬಿಸಿಲ ಬೇಗೆಯಿಂದ ಸುಡುತ್ತಿರುವ ನಾಡಿನ ಜನಕ್ಕೆ ಸಿಹಿ ಸುದ್ದಿ ನೀಡಿದೆ.
ರಾಜ್ಯದಲ್ಲಿ ಬಹುತೇಕ ಜಲಾಶಯಗಳು ಈಗ ಖಾಲಿ ಆಗಿದ್ದು, ಜನ ನೀರಿಗೆ ಪರದಾಡುತ್ತಿದ್ದಾರೆ. ಮಳೆ ಬಾರದೆ ಹೋದರೆ ಪರಿಸ್ಥಿತಿ ಕೈಮೀರಿ ಹೋಗಲಿದೆ. ಈ ಆತಂಕದ ಮಧ್ಯೆ ಈ ಬಾರಿ ಒಳ್ಳೆಯ ಮುಂಗಾರು ಮಳೆ ನಿರೀಕ್ಷೆ ಮಾಡಲಾಗಿದ್ದು ಅದಕ್ಕೂ ಮುನ್ನ ನೈರುತ್ಯ ಮಾನ್ಸೂನ್ ಸಮಯದಲ್ಲಿ ಭರ್ಜರಿ, ಗುಡುಗು ಸಿಡಿಲು ಸಹಿತ ಮಳೆ ಬೀಳುವ ನಿರೀಕ್ಷೆ ಇದೆ.
ಉತ್ತರ ಭಾರತದಲ್ಲಿ ಬಹುತೇಕ ಕಡೆ ಭಾರಿ ಮಳೆಯಾಗುತ್ತಿದ್ದು ಅನೇಕ ರಾಜ್ಯಗಳ ಶಾಲಾ & ಕಾಲೇಜು ಬಂದ್ ಮಾಡಿ ರಜೆ ಘೋಷಣೆ ಮಾಡಲಾಗಿದೆ ಕೆಲವೆಡೆ ಪರೀಕ್ಷೆ ಮುಂದೂಡಿಕೆ ಆಗುತ್ತಿವೆ. ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಇದೇ ಮಳೆ ದಕ್ಷಿಣ ಭಾರತಕ್ಕೂ ವ್ಯಾಪಿಸಲಿದ್ದು ಹವಾಮಾನ ಇಲಾಖೆ ತಜ್ಞರ ಪ್ರಕಾರ ಕರ್ನಾಟಕದಲ್ಲಿ ಮುಂದಿನ ಕೆಲ ದಿನದಲ್ಲಿ ಮಳೆ ಬೀಳುವ ನಿರೀಕ್ಷೆ ಇದೆ. ಮಾರ್ಚ್ ತಿಂಗಳ ಮೊದಲ 10 ದಿನ ದಾವಣಗೆರೆ, ಬೆಂಗಳೂರು, ಮೈಸೂರು, ಕೊಡಗು ಚಿಕ್ಕಮಗಳೂರು, ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆ ಬರಲಿದೆ ಅಂತಾ ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
