DAKSHINA KANNADA
ಬಿಸಿಲು ಬಿಸಿಗಾಳಿಗೆ ಕಂಗೆಟ್ಟಿದ್ದ ದಕ್ಷಿಣಕನ್ನಡ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಮಳೆಯ ಸಿಂಚನ

ಪುತ್ತೂರು ಮಾರ್ಚ್ 12: ಬಿಸಿ ಗಾಳಿ ಹಾಗೂ ಬಿಸಿಲ ಬೇಗೆಯಿಂದ ತತ್ತರಿಸಿದ ದಕ್ಷಿಣಕನ್ನಡ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಮಳೆಯಾಗಿದೆ. ಪುತ್ತೂರು, ಕಡಬ ಮತ್ತು ಸುಳ್ಯ ತಾಲೂಕಿನ ಹಲವೆಡೆ ಭಾರೀ ಮಳೆಯಾಗಿರುವ ಬಗ್ಗೆ ವರದಿಯಾಗಿದೆ. ಕಡಬದಲ್ಲಿ ಭಾರೀ ಗಾಳಿ ಸಹಿತ ಮಳೆ ಸುರಿದಿದೆ.
ಬೇಸಿಗೆ ಮೊದಲ ಮಳೆಗೇ ಕಡಬದ ಕೋಡಿಂಬಾಳ-ಕಲ್ಲಂತ್ತಡ್ಕ ರಸ್ತೆಯ ಸೇತುವೆ ಜಲಾವೃತಗೊಂಡ ಘಟನೆ ಕೂಡ ನಡೆದಿದೆ. ನೀರು ಹರಿಯಲು ಚರಂಡಿ ವ್ಯವಸ್ಥೆ ಸಮರ್ಪಕವಿಲ್ಲದ ಕಾರಣ ಸೇತುವೆಯ ಮೇಲೆಯೇ ಮಳೆ ನೀರು ಹರಿದಿದೆ. ಅದೂ ಬೇಸಿಗೆ ಕಾಲದಲ್ಲಿ. ಅಕಾಲಿಕವಾಗಿ ಬಂದ ಮಳೆಯಿಂದಾಗ ಜನಸಂಚಾರ ಅಸ್ತವ್ಯಸ್ತವಾಗಿತ್ತು. ಆದರೂ ಬಿಸಿಗಾಳಿಗೆ ಕಂಗೆಟ್ಟಿದ್ದ ಜನರಿಗೆ ವರುಣದೇವ ಕರುಣೆ ತೋರಿಸಿದ್ದಾನೆ.

ಮಂಗಳೂರು ನಗರದಲ್ಲೂ ಸಂಜೆಯ ಬಳಿಕ ಮಳೆ ಪ್ರಾರಂಭವಾಗಿದ್ದು, ಗುಡುಗು ಸಿಡಿಲು ಸಹಿತ ಉತ್ತಮ ಮಳೆಯಾಗಿದೆ.