DAKSHINA KANNADA
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅಲ್ಲಲ್ಲಿ ಮಳೆ ಆರ್ಭಟ

ಮಂಗಳೂರು ಮಾರ್ಚ್ 26: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬಿಸಿಲಿನ ಬೇಗೆ ನಡುವೆಯೂ ಮಳೆಯಾಗುತ್ತಿದೆ. ನಿನ್ನೆ ಸಂಜೆ ದಕ್ಷಿಣಕನ್ನಡ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಉತ್ತಮ ಮಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಸುಳ್ಯ, ಬಂಟ್ವಾಳ, ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಮಂಗಳವಾರ ಸಂಜೆ ಮಳೆಯಾಗಿದೆ. ಕಲ್ಮಡ್ಕದಲ್ಲಿ ಆಲಿಕಲ್ಲು ಮಳೆಯಾಗಿದೆ. ಪುತ್ತೂರಿನಲ್ಲೂ ಉತ್ತಮ ಮಳೆಯಾಗಿದೆ. ಸಂಜೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ.
ಇಂದು ಕೂಡ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸುಳ್ಯ ತಾಲೂಕಿನ ವಿವಿಧೆಡೆ ಮಂಗಳವಾರ ಅಪರಾಹ್ನ ಗುಡುಗು ಸಹಿತ ಗಾಳಿ-ಮಳೆಯಾಗಿದೆ. ಸಂಜೆ ತಾಲೂಕಿನ ವಿವಿಧೆಡೆ ಗುಡುಗು ಸಹಿತ ಗಾಳಿ ಮಳೆಯಾಗಿದೆ. ಸುಳ್ಯ ನಗರ, ಅರಂತೋಡು, ಸಂಪಾಜೆ, ಬೆಳ್ಳಾರೆ, ಐವರ್ನಾಡು, ನಿಂತಿಕಲ್ಲು, ಕಲ್ಮಡ್ಕ, ಜಾಲ್ಸೂರು ಸೇರಿದಂತೆ ತಾಲೂಕಿನ ವಿವಿಧೆಡೆ ಮಳೆಯಾಗಿದೆ.

ಸಂಜೆ ಬೀಸಿದ ಗಾಳಿ-ಮಳೆಗೆ ಅರಂತೋಡು ಶಾಲಾ ಬಳಿಯ ತೆಂಗಿನ ಮರ ಮುರಿದು ಬಿದ್ದು ಅಂಗಡಿ ಮಜಲು ರಸ್ತೆ ತಡೆ ಉಂಟಾಗಿ ಸಂಚಾರ ಬಂದ್ ಆಗಿತ್ತು. ರಬ್ಬರ್ ಮರಗಳು, ಅಡಿಕೆ ತೋಟಗಳಿಗೆ ಹಾನಿಯಾಗಿದೆ. ತೊಡಿಕಾನ ಗ್ರಾಮದಲ್ಲಿ ಆಲಿಕಲ್ಲು ಮಳೆ ಸುರಿದಿದ್ದು, ದೊಡ್ಡಡ್ಕ ಸಮೀಪ ಎರಡು ಮರಗಳು ವಿದ್ಯುತ್ ಲೈನ್ ಮೇಲೆ ಬಿದ್ದು ವಿದ್ಯುತ್ ಕಂಬಗಳು ತುಂಡಾಗಿದೆ. ತೊಡಿಕಾನ ಗ್ರಾಮದಲ್ಲಿ ಹಲವು ಗಂಟೆಗಳ ಕಾಲ ಕತ್ತಲು ಕವಿದಿತ್ತು.